ಮಂಡ್ಯದಲ್ಲಿ ಮಹಿಳೆಗೆ 33 ಲಕ್ಷ ಪಂಗನಾಮ ಐಶ್ವರ್ಯಗೌಡ ವಿರುದ್ಧ ಮತ್ತೊಂದು ಎಫ್ಐಆರ್

ಮಂಡ್ಯ

1/21/20251 ನಿಮಿಷ ಓದಿ

ಮಂಡ್ಯ:

ವಂಚಕಿ ಐಶ್ವರ್ಯಗೌಡ ವಿರುದ್ಧ ಮೇಲಿಂದ ಮೇಲೆ ಎಫ್ಐಆರ್ ದಾಖಲಾಗುತ್ತಲೇ ಇವೆ. 2 ದಿನಗಳ ಹಿಂದೆಯಷ್ಟೇ ಬೆಂಗಳೂರಿನ ಆರ್.ಆರ್ ನಗರ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣದಲ್ಲಿ ಐಶ್ವರ್ಯ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಇದೀಗ ಮಂಡ್ಯದಲ್ಲಿ ಮತ್ತೊಂದು ಎಫ್ಐಆರ್ ದಾಖಲಾಗಿದೆ.

ಇಲ್ಲಿನ ಚಾಮುಂಡೇಶ್ವರಿನಗರದ ನಿವಾಸಿ ಭಾಗ್ಯಮ್ಮ ಎಂಬುವವರು ತಮಗೂ ವಂಚನೆ ಮಾಡಿರುವುದಾಗಿ ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಮೇರೆಗೆ ಐಶ್ವರ್ಯಗೌಡ ವಿರುದ್ಧ ಐಪಿಸಿ ಸೆಕ್ಷನ್ 406, 420, 417, 120ಬಿ, 540, 34ರ ಅಡಿ ಕೇಸ್ ದಾಖಲಾಗಿದೆ. ನವ್ಯಶ್ರೀ ಅಲಿಯಾಸ್ ಐಶ್ವರ್ಯಗೌಡ, ಪತಿ ಹರೀಶ್, ಸಹೋದರ ಮಂಜುನಾಥ್ ಹಾಗೂ ಯಶವಂತ್ ಎಂಬುವರ ಪ್ರಕರಣ ದಾಖಲಾಗಿದೆ.

ದೂರಿನಲ್ಲಿ ಏನಿದೆ?

2017ರ ಜನವರಿಯಿಂದ ಜೂನ್ ತಿಂಗಳ ಅವಧಿಯಲ್ಲಿ ರಿಯಲ್ ಎಸ್ಟೇಟ್ ಹಾಗೂ ಚೀಟಿ ವ್ಯವಹಾರ ಮಾಡುವುದಾಗಿ ಐಶ್ವರ್ಯ ನಂಬಿಸಿದ್ದಾಳೆ. ಒಟ್ಟು 33 ಲಕ್ಷ ರೂ. ನಗದು ಹಾಗೂ 366ಗ್ರಾಂ ಚಿನ್ನದ ಒಡವೆಗಳನ್ನ ಪಡೆದುಕೊಂಡಿದ್ದಾಳೆ. ಇದು ತನ್ನ ಮೃತ ಗಂಡನ ನಿವೃತ್ತಿಯ ಹಣ ಅಂತ ಭಾಗ್ಯಮ್ಮ ಹೇಳಿಕೊಂಡಿದ್ದಾಳೆ. 1 ಲಕ್ಷಕ್ಕೆ 10 ಪರ್ಸೆಂಟ್ ಬಡ್ಡಿ ಹಣ ನೀಡುವುದಾಗಿ ಆಮಿಷ ಒಡ್ಡಿ ಹಣ ಪಡೆದ ಐಶ್ವರ್ಯ ವಂಚನೆ ಎಸಗಿದ್ದಾಳೆ ಎಂದು ದೂರಿನಲ್ಲಿ ಭಾಗ್ಯಮ್ಮ ತಿಳಿಸಿದ್ದಾರೆ.

ಈಗಾಗಲೇ ಮಂಡ್ಯದ ಪೂರ್ವ ಪೊಲೀಸ್ ಠಾಣೆಯಲ್ಲಿ ರವಿಕುಮಾರ್ ಹಾಗೂ ಪೂರ್ಣಿಮಾ ಎಂಬುವವರು ನೀಡಿದ ದೂರಿನ ಮೇರೆಗೆ ಕೇಸ್ ದಾಖಲಾಗಿದೆ. 55 ಲಕ್ಷ ನಗದು ಹಾಗೂ ಚಿನ್ನಾಭರಣ ಪಡೆದು ವಂಚನೆ ಮಾಡಿರುವುದಾಗಿ ಕೇಸ್ ದಾಖಲಾಗಿದೆ.

ಈ ಮಧ್ಯೆ ಸೋಮವಾರ ಪೊಲೀಸರು ನೋಟೀಸ್ ನೀಡಿದ್ರೂ ವಂಚಕಿ ಐಶ್ವರ್ಯಗೌಡ ವಿಚಾರಣೆಗೆ ಹಾಜರಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.