ಸದ್ದಿಲ್ಲದೆ ಧಾರವಾಡಕ್ಕೆ ಹೊರಟಿದೆ ಬೆಳಗಾವಿ ನೀರು; ಜಾರಕಿಹೊಳಿ-ಡಿಕೆಶಿ ನಡುವೆ ಮತ್ತೊಂದು ಹೋರಾಟ?
ಬೆಳಗಾವಿಹೋಮ್ ಪೇಜ್ಧಾರವಾಡ


ಬೆಳಗಾವಿ:
ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತು ಸಚಿವ ಸತೀಶ್ ಜಾರಕಿಹೊಳಿ ಮಧ್ಯೆ ಮತ್ತೊಂದು ಹಂತದ ಹೋರಾಟ ನಡೆಯುತ್ತಿದೆಯಾ ಎಂಬ ಮಾತು ಕೇಳಿಬಂದಿದೆ. ಹುಬ್ಬಳ್ಳಿ-ಧಾರವಾಡಕ್ಕೆ ಬೆಳಗಾವಿಯ ಹಿಡಕಲ್ ಜಲಾಶಯದ ನೀರು ಹರಿಸುವ ಯೋಜನೆ ಸದ್ದಿಲ್ಲದೆ ನಡೆಯುತ್ತಿದ್ದು, ಸತೀಶ್ ಜಾರಕಿಹೊಳಿ ಅವರ ಗಮನಕ್ಕೆ ಬಾರದೆ ಜಲಸಂಪನ್ಮೂಲ ಇಲಾಖೆ ಸಚಿವರಾಗಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರು ಈ ಯೋಜನೆಗೆ ಸದ್ದಿಲ್ಲದೆ ಚಾಲೆನೆ ನೀಡಿದ್ರಾ? ಎಂಬ ಪ್ರಶ್ನೆ ಎದುರಾಗಿದೆ.
ಕೆಐಎಡಿಬಿ ರೂಪಿಸಿರುವ 300 ಕೋಟಿ ವೆಚ್ಚದ ಯೋಜನೆಗೆ ಭರದಿಂದ ಸಾಗಿದ್ದು, ಈ ಬಗ್ಗೆ ಬೆಳಗಾವಿಯ ಜನಪ್ರತಿನಿಧಿಗಳಿಗೆ ಮಾಹಿತಿ ಇಲ್ಲ ಎನ್ನಲಾಗಿದೆ. ಬೃಹತ್ ಯೋಜನೆಯ ಕಾಮಗಾರಿ ನಡೆಯುತ್ತಿದ್ದರೂ ಬೆಳಗಾವಿ ಜಿಲ್ಲೆಯ ನಾಯಕರು ದಿವ್ಯಮೌನಕ್ಕೆ ಶರಣಾಗಿದ್ದಾರೆ.
ಜಾರಕಿಹೊಳಿ ಗಮನಕ್ಕೆ ತಾರದೆ ಯೋಜನೆಗೆ ಚಾಲನೆ?
ಧಾರವಾಡ ಜಿಲ್ಲೆಯ ಕೈಗಾರಿಕಾ ಪ್ರದೇಶಕ್ಕೆ ಹಿಡಕಲ್ ಜಲಾಶಯದಿಂದ ನೀರು ಪೂರೈಸುವ ಯೋಜನೆ ಇದಾಗಿದೆ. ಶಂಕುಸ್ಥಾಪನೆ ಆಗದಿದ್ದರೂ ಸುಮಾರು 300 ಕೋಟಿ ವೆಚ್ಚದ ಕಾಮಗಾರಿ ವೇಗ ಪಡೆದುಕೊಂಡಿದೆ. ಸತೀಶ್ ಜಾರಕಿಹೊಳಿ ಅವರು ಹಿಡಕಲ್ ಜಲಾಶಯ ನೀರು ನಿರ್ವಹಣಾ ಸಲಹಾ ಸಮಿತಿ ಅಧ್ಯಕ್ಷರಾಗಿದ್ದಾರೆ. ಮತ್ತೊಂದೆಡೆ ಜಲಸಂಪನ್ಮೂಲ ಇಲಾಖೆ ಸಚಿವರಾಗಿರುವ ಡಿಸಿಎಂ ಡಿಕೆ ಶಿವಕುಮಾರ್ ಜಾರಕಿಹೊಳಿ ಅವರ ಗಮನಕ್ಕೆ ತಾರದೆ ಈ ಯೋಜನೆಗೆ ಚಾಲನೆ ನೀಡಿದ್ರಾ ಎಂಬ ಪ್ರಶ್ನೆ ಎದುರಾಗಿದೆ.
ಜಿಲ್ಲಾಡಳಿತಕ್ಕೂ ಇಲ್ಲ ಮಾಹಿತಿ
ಧಾರವಾಡ ಪಕ್ಕದಲ್ಲಿ ನವಿಲು ತೀರ್ಥ ಜಲಾಶಯವಿದ್ದರೂ ಹಿಡಕಲ್ ಜಲಾಶಯದ ನೀರನ್ನೇ ಬಳಸಲು ಮುಂದಾಗಿದ್ದಾರೆ. ಧಾರವಾಡದಿಂದ 150 ಕಿಮೀ ಅಂತರದಲ್ಲಿರುವ ಹಿಡಕಲ್ ಜಲಾಶಯದಿಂದ ಜಿಲ್ಲೆಯ ಕೈಗಾರಿಕಾ ಪ್ರದೇಶಕ್ಕೆ ನೀರು ಪೂರೈಕೆಗೆ ಯೋಜನೆ ಸಿದ್ಧಪಡಿಸಲಾಗಿತ್ತು. ಪೈಪ್‌ಲೈನ್ ಮೂಲಕ ಹಿಡಕಲ್ ಜಲಾಶಯದಿಂದ ನೀರು ಒಯ್ಯುವ ಯೋಜನೆಗೆ ಸದ್ದಿಲ್ಲದೇ ಚಾಲನೆಗೊಂಡಿದೆ. ಆದರೆ, ಬೆಳಗಾವಿ ಜಿಲ್ಲಾಡಳಿತಕ್ಕೂ ಈ ಯೋಜನೆ ಜಾರಿಯಾಗುತ್ತಿರುವ ಬಗ್ಗೆ ಮಾಹಿತಿ ಇಲ್ಲ. ಜಲಾಶಯದಿಂದ ನೀರು ಪೂರೈಸುವ ಸರ್ಕಾರದ ಯೋಜನೆಗೆ ಬೆಳಗಾವಿ ಜಿಲ್ಲೆಯಲ್ಲಿ ಸಾಕಷ್ಟು ವಿರೋಧವಿದೆ ಎನ್ನಲಾಗಿದೆ.
ಜಾರಕಿಹೊಳಿ ವಿರುದ್ಧ ಹೈಕಮಾಂಡ್‌ಗೆ ದೂರು?
ಈಗಾಗಲೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ವಿಚಾರವಾಗಿ ಬಹಿರಂಗವಾಗಿ ಸತೀಶ್ ಜಾರಕಿಹೊಳಿ ಮಾತನಾಡಿರುವ ಬಗ್ಗೆ ಡಿಕೆಶಿ ಸಮಾಧಾನ ಗೊಂಡಿದ್ದಾರೆ. ಇದೇ ವಿಚಾರ ಸತೀಶ್ ಜಾರಕಿಹೊಳಿ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕೆ.ಸಿ.ವೇಣುಗೋಪಾಲ್‌ಗೆ ಡಿಕೆಶಿ ದೂರು ನೀಡಿದ್ದಾರೆ ಎನ್ನಲಾಗಿದೆ. ಕೆಪಿಸಿಸಿ ಅಧ್ಯಕ್ಷರ ಹುದ್ದೆ ಬದಲಾವಣೆ ಹಾಗೂ ಆಕಾಂಕ್ಷಿ ವಿಚಾರದಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಿದ್ದು, ಇದರಿಂದ ಪಕ್ಷ ಹಾಗೂ ವೈಯಕ್ತಿಕ ವರ್ಚಸ್ಸಿಗೆ ಧಕ್ಕೆಯಾಗಿದೆ. ಬಹಿರಂಗ ಹೇಳಿಕೆ ಯಾರೂ ಕೊಡಬಾರದೆಂದು ಸೂಚಿಸಿದರೂ ಯಾರೂ ಕೂಡ ಕೇರ್ ಮಾಡುತ್ತಿಲ್ಲ. ಮಧ್ಯಪ್ರವೇಶ ಮಾಡುವಂತೆ ಡಿಕೆ ಶಿವಕುಮಾರ್ ದೂರು ನೀಡಿದ್ದಾರೆ ಎನ್ನಲಾಗಿದೆ.
ಡಿಸಿಎಂ ಡಿಕೆ ಶಿವಕುಮಾರ್ ದೂರಿನ ಹಿನ್ನೆಲೆಯಲ್ಲಿ ಸಚಿವ ಸತೀಶ್ ಜಾರಕಿಹೊಳಿಗೆ ಸುರ್ಜೇವಾಲ ಅವರು ಕರೆ ಮಾಡಿ ಸದ್ಯಕ್ಕೆ ಸೈಲೆಂಟಾಗಿರಿ, ಯಾವುದೇ ಹೇಳಿಕೆ ಕೊಡಬೇಡಿ ಎಂದು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಅಲ್ಲದೆ ಇಂದು ರಾಜ್ಯಕ್ಕೆ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಆಗಮಿಸುತ್ತಿದ್ದಾರೆ. ಕಾಂಗ್ರೆಸ್ ಕದನಕ್ಕೆ ಅಲ್ಪ ವಿರಾಮ ಹಾಕಲು ಉಸ್ತುವಾರಿ ಸುರ್ಜೇವಾಲ ರಾಜ್ಯಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಗಾಂಧಿ ಭಾರತ ಕಾರ್ಯಕ್ರಮಕ್ಕೂ ಮೊದಲೆ ಬೆಳಗಾವಿಗೆ ಸುರ್ಜೇವಾಲ ಅವರು ಆಗಮಿಸುತ್ತಿದ್ದು, ಇಂದು ಸತೀಶ್ ಜಾರಕಿಹೊಳಿ ಜತೆ ಚರ್ಚೆ ನಡೆಸುವ ಸಾಧ್ಯತೆ ಇದೆ.