ಬಳ್ಳಾರಿ ಬಿಜೆಪಿ ಬಣ ಬಡಿದಾಟ: ರಾಮುಲು - ರೆಡ್ಡಿ ಪರಸ್ಪರ ಆಕ್ರೋಶ; ಹೈಕಮಾಂಡ್ ತಲೆಯನೋವು

ಬಳ್ಳಾರಿಹೋಮ್ ಪೇಜ್

1/25/20251 ನಿಮಿಷ ಓದಿ

ಬಿಜೆಪಿಯಲ್ಲಿ ಗೆದ್ದವರು ಸೋತವರ ಮೇಲಾಟ ಜೋರಾಗಿದೆ. ಬಣ ಬಡಿದಾಟವೂ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈ ನಡುವೆ ಸತತ ಸೋಲಿನಿಂದ ಕಂಗೆಟ್ಟಿರುವ ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿ ನಡುವಣ ಬಿರುಕು ಹೆಚ್ಚಾಗಿದ್ದು, ಬಹಿರಂಗವಾಗಿಯೇ ಪರಸ್ಪರ ಕೆಸರೆರಚಾಟ ನಡೆಸುತ್ತಿರುವುದು ಹೈಕಮಾಂಡ್ ಗೆ ತಲೆನೋವು ತಂದಿಟ್ಟಿದೆ. ರಾಮುಲು ವರ್ಸಸ್ ರೆಡ್ಡಿ ಸಮರ ಹೈಕಮಾಂಡ್ ಗಮನ ಸೆಳೆದಿದ್ದು, ಇದರಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುವಂತೆ ರಾಜ್ಯ ನಾಯಕರಿಗೆ ಸೂಚನೆ ನೀಡಿದೆ.

ಸದ್ಯ ದೆಹಲಿ ಭೇಟಿಗೆ ರಾಮುಲು ಒಂದು ವಾರ ಸಮಯಾವಕಾಶ ಕೇಳಿದ್ದು, ಅದಕ್ಕೂ ಮುನ್ನ ಅತ್ಯಾಪ್ತರು, ಬೆಂಬಲಿಗರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಬಳ್ಳಾರಿ ನಿವಾಸದಲ್ಲೂ ಗುರುವಾರ ಸಾಲು ಸಾಲು ಸಭೆಗಳನ್ನು ನಡೆಸಿದ್ದರು. ಜನಾರ್ದನ ರೆಡ್ಡಿ ಪತ್ರಿಕಾಗೋಷ್ಠಿ ನಡೆಸಿ ಸಾಲುಸಾಲು ಆರೋಪಗಳನ್ನು ಮಾಡಿದ ಬೆನ್ನಲ್ಲೇ ರಾಮುಲು ನಿವಾಸದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ಏತನ್ಮಧ್ಯೆ, ರಾಮುಲು ಹಾಗೂ ರೆಡ್ಡಿ ಮುನಿಸು ಪಕ್ಷದ ಮೇಲೆ ಪರಿಣಾಮ ಬೀರದಂತೆ ರಾಜ್ಯ ನಾಯಕರಿಗೆ ಹೈಕಮಾಂಡ್ ಸೂಚನೆ ನೀಡಿದೆ. ರಾಮುಲು ಅವರನ್ನು ಕರೆದು ಮಾತನಾಡುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರಗೆ ತಿಳಿಸಲಾಗಿದೆ. ಏನೇ ಗೊಂದಲ ಇದ್ದರೂ ಪಕ್ಷದ ಚೌಕಟ್ಟಿನಲ್ಲಿ ಬಗೆಹರಿಸುವಂತೆ ದೆಹಲಿ ನಾಯಕರು ಸಂದೇಶ ರವಾನಿಸಿದ್ದಾರೆ. ಈ ಮೂಲಕ ಬಳ್ಳಾರಿಯ ಬಿಜೆಪಿ ಬಣ ಬಡಿದಾಟಕ್ಕೆ ಮುಲಾಮು ಹಚ್ಚಲು ಬಿಜೆಪಿ ಹೈಕಮಾಂಡ್ ಮುಂದಾಗಿದೆ.

ಇತ್ತ ರಾಮುಲು ಆಪ್ತರು, ಬೆಂಬಲಿಗರಿಂದ ಅಭಿಪ್ರಾಯ ಸಂಗ್ರಹ ನಡೆಯುತ್ತಿದೆ. ರಾಮುಲು ಹೈಕಮಾಂಡ್ ಭೇಟಿಗೆ ಒಂದು ವಾರ ಕಾಲಾವಕಾಶ ಕೇಳಿದ್ದು, ಮತ್ತಷ್ಟು ಕುತೂಹಲ ಹೆಚ್ಚಿಸಿದೆ. ದೆಹಲಿಗೆ ರಾಮುಲುರನ್ನು ಕರೆದುಕೊಂಡು ಬರುವ ಜವಾಬ್ದಾರಿಯನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಗೆ ವಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಗುರುವಾರ ಪತ್ರಿಕಾಗೋಷ್ಠಿ ನಡೆಸಿದ್ದ ಜನಾರ್ದನ ರೆಡ್ಡಿ, ಶ್ರೀರಾಮುಲು ವಿರುದ್ಧ ಸಾಲು ಸಾಲು ಆರೋಪಗಳನ್ನು ಮಾಡಿದ್ದರು. ಅಲ್ಲದೆ, ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಮಣಿಸುವುದಕ್ಕಾಗಿ ಶ್ರೀರಾಮುಲು ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೆಳೆಯಲು ಡಿಸಿಎಂ ಡಿಕೆ ಶಿವಕುಮಾರ್ ಯತ್ನಿಸುತ್ತಿದ್ದಾರೆ ಎಂದು ರೆಡ್ಡಿ ಸ್ಫೋಟಕ ಆರೋಪ ಮಾಡಿದ್ದರು. ಆದರೆ ಇದನ್ನು ಡಿಕೆ ಶಿವಕುಮಾರ್ ಅಲ್ಲಗಳೆದಿದ್ದಾರೆ. ಈ ಎಲ್ಲದರ ಬೆನ್ನಲ್ಲೇ ರಾಮುಲು ಕೂಡ ರೆಡ್ಡಿಗೆ ತಿರುಗೇಟು ನೀಡಿದ್ದರು. ನಂತರ ಹೈಕಮಾಂಡ್ ಭೇಟಿಯಾಗುವ ನಿರ್ಧಾರಕ್ಕೆ ಬಂದಿದ್ದರಾದರೂ, ದಿಢೀರಾಗಿ ಒಂದು ವಾರ ಕಾಲಾವಕಾಶ ಕೇಳಿದ್ದಾರೆ. ಇದು ಕುತೂಹಲಕ್ಕೆ ಕಾರಣವಾಗಿದೆ. ಒಂದೆಡೆ ಯತ್ನಾಳ್ ಮತ್ತು ವಿಜಯೇಂದ್ರನ ಬಣ ಬಡಿದಾಟ, ಇತ್ತ ಶ್ರೀರಾಮುಲು-ಜನಾರ್ದನ ರೆಡ್ಡಿಯ ವೈಮನಸ್ಯ. ಈ ಎರಡೂ ಹೈಕಮಾಂಡ್ ಗೆ ಪೀಕಲಾಟ ತಂದೊಡ್ಡಿದೆ. ರಾಜ್ಯ ಬಿಜೆಪಿಯ ರಂಪ ರಾಮಾಯಣಗಳನ್ನು ಹೈಕಮಾಂಡ್ ಹೇಗೆ ಬಗೆಹರಿಸುತ್ತೋ ಕಾದು ನೋಡಬೇಕಿದೆ.

ಈ ವಿಡಿಯೋ ನಿಮಗೆ ಇಷ್ಟವಾದಲ್ಲಿ ನಮ್ಮ ಬಿಎನ್ ಎನ್ ಚಾನಲ್ ಅನ್ನು ಸಬ್ ಸ್ಕ್ರೈಬ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ. ಬೆಲ್ ಐಕಾನ್ ಒತ್ತುವುದನ್ನು ಮರೆಯದಿರಿ.