ಮುಡಾ ಕೇಸ್‌ನಲ್ಲಿ ಸಿಎಂ ಸಿದ್ಧರಾಮಯ್ಯಗೆ ಬಿಗ್ ರಿಲೀಫ್
ಧಾರವಾಡಹೋಮ್ ಪೇಜ್
ಧಾರವಾಡ:
ಮುಡಾ ಕೇಸ್‌ನಲ್ಲಿ ಸಿಎಂ ಸಿದ್ಧರಾಮಯ್ಯಗೆ ಬಿಗ್ ರಿಲೀಫ್ ಸಿಕ್ಕಿದ್ದು, ಕರ್ನಾಟಕ ಹೈಕೋರ್ಟ್ನ ಧಾರವಾಡ ಪೀಠ ಪ್ರಕರಣವನ್ನು ಸಿಬಿಐಗೆ ನೀಡಲು ನಿರಾಕರಿಸಿದೆ. ಇಡೀ ಪ್ರಕರಣವನ್ನು ಸಿಬಿಐಗೆ ಹಸ್ತಾಂತರ ಮಾಡುವಂತೆ ದೂರುದಾರ ಸ್ನೇಹಮಯಿ ಕೃಷ್ಣ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದರು.
ಇದರ ವಿಚಾರಣೆ ನಡಿಸಿದ್ದ ನ್ಯಾಯಮೂರ್ತಿ ನಾಗಪ್ರಸನ್ನ ಪೀಠ ಈ ಆದೇಶ ನೀಡಿದೆ. ಮುಡಾ ಕೇಸ್‌ಅನ್ನು ಸದ್ಯ ಲೋಕಾಯುಕ್ತ ಹಾಗೂ ರಾಜ್ಯದ ಏಜೆನ್ಸಿಗಳೇ ತನಿಖೆ ನಡೆಯುತ್ತಿದೆ. ಸಿದ್ಧರಾಮಯ್ಯ ಸಿಎಂ ಆಗಿರುವ ಹಿನ್ನಲೆಯಲ್ಲಿ ಅವರ ಏಜೆನ್ಸಿಗಳೇ ಪ್ರಕರಣದ ವಿಚಾರಣೆ ನಡೆಸುವುದು ಸರಿಯಲ್ಲ ಹಾಗಾಗಿ ಇಡೀ ಪ್ರಕರಣವನ್ನು ಸಿಬಿಐಗೆ ಹಸ್ತಾಂತರ ಮಾಡಬೇಕು ಎಂದು ಆಗ್ರಹಿಸಿ ದೂರುದಾರ ಸ್ನೇಹಮಯಿ ಕೃಷ್ಣ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಇದರ ವಿಚಾರಣೆ ನಡೆಸಿದ್ದ ಕೋರ್ಟ್ ಶುಕ್ರವಾರ ತನ್ನ ತೀರ್ಪು ಪ್ರಕಟಿಸಿದೆ. ಇದರೊಂದಿಗೆ ಕಾನೂನು ಹೋರಾಟದಲ್ಲಿ ಸ್ನೇಹಮಯಿ ಕೃಷ್ಣಗೆ ದೊಡ್ಡ ಹಿನ್ನಡೆಯಾಗಿದೆ. ಆದರೆ, ಕೇಸ್‌ಅನ್ನು ಸಿಬಿಐಗೆ ವರ್ಗಾವಣೆ ಮಾಡೋದಿಲ್ಲ, ಆದರೆ, ಲೋಕಾಯುಕ್ತ ತನಿಖೆ ಮುಂದುವರಿಯಲಿದೆ ಎಂದು ಹೇಳಿದೆ.
ಏನಿದು ಪ್ರಕರಣ: ಈ ಪ್ರಕರಣವು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಭೂಮಿ ಮಂಜೂರು ಮಾಡುವಲ್ಲಿ ಭ್ರಷ್ಟಾಚಾರದ ಆರೋಪಗಳಿಗೆ ಸಂಬಂಧಿಸಿದೆ.
ದೂರಿನ ಪ್ರಕಾರ, ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಅವರ ಸಹೋದರ ಮಲ್ಲಿಕಾರ್ಜುನ ಸ್ವಾಮಿ ಮೂರು ಎಕರೆಗೂ ಹೆಚ್ಚು ವಿಸ್ತೀರ್ಣದ ಭೂಮಿಯನ್ನು ’ಉಡುಗೊರೆಯಾಗಿ’ ನೀಡಿದ್ದರು. ಅಂತಹ ಭೂಮಿಯನ್ನು ಆರಂಭದಲ್ಲಿ ಸ್ವಾಧೀನಪಡಿಸಿಕೊಂಡು, ನಂತರ ಡಿ-ನೋಟಿಫೈ ಮಾಡಿ ಸ್ವಾಮಿ ಖರೀದಿಸಿದರು. ಖಾಸಗಿ ವ್ಯಕ್ತಿಗಳು ಅದನ್ನು ಹೊಂದಿದ್ದರೂ ಸಹ, ಅದನ್ನು ಮುಡಾ ಅಭಿವೃದ್ಧಿಪಡಿಸಿದೆ.
ಸ್ವಾಮಿ ಅವರು 2004 ರಲ್ಲಿ ಆ ಭೂಮಿಯನ್ನು ಖರೀದಿಸಿ ತಮ್ಮ ಸಹೋದರಿಗೆ ಉಡುಗೊರೆಯಾಗಿ ನೀಡಿದ್ದಾಗಿ ಹೇಳಿಕೊಂಡಿದ್ದಾರೆ. ಆದರೆ ಆ ಭೂಮಿಯನ್ನು ಮುಡಾ ಅಕ್ರಮವಾಗಿ ಅಭಿವೃದ್ಧಿಪಡಿಸಿದ್ದರಿಂದ, ಪಾರ್ವತಿ ಪರಿಹಾರವನ್ನು ಕೋರಿದರು. 50:50 ಯೋಜನೆಯಡಿಯಲ್ಲಿ ಮೂಲ ಮೂರು ಎಕರೆಗಳಿಗಿಂತ ಹೆಚ್ಚಿನ ಮೌಲ್ಯದ 14 ಪರ್ಯಾಯ ಭೂಮಿಯನ್ನು ಅಭಿವೃದ್ಧಿಪಡಿಸಿದ್ದು ಸೇರಿದಂತೆ, ಅವರು ಹೆಚ್ಚು ಮೊತ್ತದ ಪರಿಹಾರವನ್ನು ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.
2025 ಜುಲೈ 26 ರಂದು, ಕಾರ್ಯಕರ್ತರಾದ ಟಿ.ಜೆ. ಅಬ್ರಹಾಂ, ಸ್ನೇಹಮಯಿ ಕೃಷ್ಣ ಮತ್ತು ಪ್ರದೀಪ್ ಕುಮಾರ್ ಎಸ್.ಪಿ. ಅವರು ಮಾಡಿದ ಖಾಸಗಿ ದೂರುಗಳ ನಂತರ, ಕರ್ನಾಟಕ ರಾಜ್ಯಪಾಲರು ಈ ವಿಷಯದಲ್ಲಿ ಸಿದ್ದರಾಮಯ್ಯ (ಸಾರ್ವಜನಿಕ ಸೇವಕ) ವಿರುದ್ಧ ಭ್ರಷ್ಟಾಚಾರ ಪ್ರಕರಣ ದಾಖಲಿಸಲು ಅನುಮತಿ ನೀಡಿದ್ದರು.
ಈ ಕ್ರಮವನ್ನು ಪ್ರಶ್ನಿಸಿ ಸಿದ್ದರಾಮಯ್ಯ ಅವರು ಹೈಕೋರ್ಟ್‌ಗೆ ಮೊರೆ ಹೋಗಿದ್ದರು. ಅಲ್ಲಿ ಅವರು ತಮ್ಮ ಪತ್ನಿಗೆ ಪರಿಹಾರ ನೀಡುವ ಮುಡಾ ನಿರ್ಧಾರವನ್ನು ತಮ್ಮ ಹಸ್ತಕ್ಷೇಪ ಅಥವಾ ಪ್ರಭಾವವಿಲ್ಲದೆ ಸ್ವತಂತ್ರವಾಗಿ ತೆಗೆದುಕೊಂಡಿದೆ ಎಂದು ವಾದಿಸಿದ್ದರು.
ಆದರೆ, ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು 2024ರ ಸೆಪ್ಟೆಂಬರ್ 24ರಂದು ಅವರ ಅರ್ಜಿಯನ್ನು ವಜಾಗೊಳಿಸಿದರು. ನಂತರ, ಕರ್ನಾಟಕ ಲೋಕಾಯುಕ್ತರು ಸಿದ್ದರಾಮಯ್ಯ ಮತ್ತು ಇತರ ಮೂವರ ವಿರುದ್ಧ ಭ್ರಷ್ಟಾಚಾರ, ವಂಚನೆ ಮತ್ತು ನಕಲಿ ದಾಖಲೆ ಸೃಷ್ಟಿ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಿದ್ದರು. ನಂತರ, ಸ್ನೇಹಮಯಿ ಕೃಷ್ಣ ಅವರು ತನಿಖೆಯನ್ನು ಸಿಬಿಐಗೆ ವರ್ಗಾಯಿಸಲು ಅರ್ಜಿ ಸಲ್ಲಿಸಿದ್ದರು.