ಬಿಜೆಪಿ ಕೋರ್ ಕಮಿಟಿ ಸಭೆ ರಾಮುಲುಗೆ ರಾಧಾಮೋಹನ್ ದಾಸ್ ಕ್ಲಾಸ್!
ಹೋಮ್ ಪೇಜ್ಬೆಂಗಳೂರು ನಗರ


ಬೆಂಗಳೂರು: ಕೋರ್ ಕಮಿಟಿ ಸಭೆಯಲ್ಲಿ ಮಾಜಿ ಸಂಸದ ಶ್ರೀರಾಮುಲುಗೆ ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಕ್ಲಾಸ್ ಮಾಡಿರುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
ಸಭೆಯಲ್ಲಿ ಸಂಡೂರು ವಿಧಾನಸಭಾ ಕ್ಷೇತ್ರದ ಉಪ-ಚುನಾವಣೆಯಲ್ಲಿ ಬಂಗಾರು ಹನುಮಂತು ಸೋಲಿನ ಬಗ್ಗೆ ಚರ್ಚೆ ನಡೆಯಿತು. ಚುನಾವಣೆಯ ಫಲಿತಾಂಶದ ಬಳಿಕ ಶ್ರೀರಾಮುಲು ವಿರುದ್ಧ ಬಿಜೆಪಿ ನಾಯಕರಿಗೆ ಬಂಗಾರು ಹನುಮಂತು ದೂರು ನೀಡಿದ್ದರು.
ಬಂಗಾರು ಹನುಮಂತು ದೂರನ್ನು ಆಧರಿಸಿ, ಕೋರ್ ಕಮಿಟಿ ಸಭೆಯಲ್ಲಿ ರಾಧಾಮೋಹನ್ ದಾಸ್ ಅಗರ್‌ವಾಲ್ ರಾಮುಲು ಅವರ ಕಾರ್ಯವೈಖರಿ ಪ್ರಶ್ನಿಸಿದ್ದಾರೆ. ನೀವು ಉಪ-ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಸರಿಯಾಗಿ ಕಾರ್ಯನಿರ್ವಹಣೆ ಮಾಡಿಲ್ಲ ಎಂಬ ದೂರು ಬಂದಿದೆ. ಇದಕ್ಕೆ ಉತ್ತರಿಸಿ ಎಂದು ಕೇಳಿದ್ದಾರೆ.
ಅಗರ್‌ವಾಲ್ ಅವರ ಶಾಕಿಂಗ್ ಪ್ರಶ್ನೆಗೆ ಗಲಬಿಲಿಗೊಂಡ ಶ್ರೀರಾಮುಲು ನಾನು ಕಷ್ಟಪಟ್ಟು ಶ್ರಮವಹಿಸಿ, ಉಪ-ಚುನಾವಣೆಯಲ್ಲಿ ಕೆಲಸ ಮಾಡಿದ್ದೇನೆ. ನನ್ನ ವಿರುದ್ಧ ಸುಖಾಸುಮ್ಮನೆ ದೂರು ನೀಡಲಾಗಿದೆ, ಇದು ಸರಿಯಲ್ಲ. ಇಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಣೆ ಮಾಡುವವರಿಗೆ ಬೆಲೆಯೇ ಸಿಗುವುದಿಲ್ಲ ರಾಮುಲು ಅಸಮಾಧಾನ ಹೊರಹಾಕಿದ್ದಾರೆ. ರಾಮುಲು ಮಾತಿಗೆ ಏನೂ ಪ್ರತಿಕ್ರಿಯೆ ನೀಡದೇ ರಾಧಾಮೋಹನ್ ದಾಸ್ ಅಗರ್‌ವಾಲ್ ಸುಮ್ಮನಾಗಿದ್ದರು. ಈ ಮೂಲಕ ಬಳ್ಳಾರಿ ಬಿಜೆಪಿ ಘಟಕದ ಒಳ ಕಚ್ಚಾಟ ಕೋರ್ ಕಮಿಟಿ ಸಭೆಯಲ್ಲೂ ಬಹಿರಂಗವಾಯಿತು.
ಕೋರ್ ಕಮಿಟಿ ಸಭೆ ಮುಕ್ತಾಯವಾಗುತ್ತಿದ್ದಂತೆ ಮಾಧ್ಯಮಗಳ ಮುಂದೆ ಬಂದು ಹೇಳಿಕೆ ನೀಡಲು ಶ್ರೀರಾಮುಲು ನಿಂತಿದ್ದರು. ಈ ವೇಳೆ ರಾಮುಲು ಅವರನ್ನು ಸಿ.ಟಿ. ರವಿ ಹಾಗೂ ವಿಜಯೇಂದ್ರ ತಡೆದರು. ರವಿ ಹೇಳಿಕೆಯ ಬಳಿಕ ರಾಮುಲು ಅವರನ್ನು ಸಮಾಧಾನಪಡಿಸಲು ವಿಜಯೇಂದ್ರ, ಸಿ.ಟಿ.ರವಿ ಪಕ್ಕಕ್ಕೆ ಕರೆದುಕೊಂಡು ಹೋದರು.
ಸದ್ಯ ಮಾಧ್ಯಮಗಳ ಮುಂದೆ ಯಾವುದೇ ವಿಚಾರವನ್ನು ಪ್ರಸ್ತಾಪ ಮಾಡದೇ ಹೊರಡುವಂತೆ ರಾಮುಲುಗೆ ವಿಜಯೇಂದ್ರ ಸೂಚಿಸಿದ್ದಾರೆ. ನಂತರ ಬೇಸರದಿಂದಲೇ ಬಿಜೆಪಿ ಕಚೇರಿಯಿಂದ ರಾಮುಲು ಹೊರಟರು.