ಕೃಷ್ಣಬೈರೇಗೌಡ ಕೃಪೆ; ಬಿಬಿಎಂಪಿ ಕಡೆಯೇ?

ಹೋಮ್ ಪೇಜ್ಬೆಂಗಳೂರು ನಗರನೊಂದಣಿ

1/8/20251 ನಿಮಿಷ ಓದಿ

ನೋಂದಣಿ ಇಲಾಖೆ ಅಧ್ವಾನಗಳಿಗೆ ಕೊನೆ ಮೊದಲಿಲ್ಲದಂತಾಗಿದೆ. ಕಂದಾಯ ಸಚಿವ ಕೃಷ್ಣಬೈರೇಗೌಡರು ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದಂತೆ ಇದೀಗ ಹೊಸ ಹೊಸ ನಿಯಮಗಳ ಮೂಲಕ ಜನಸಾಮಾನ್ಯರ ಪೀಕಲಾಟಕ್ಕೆ ನಾಂದಿ ಹಾಡಿದ್ದಾರೆ. ಇಷ್ಟು ದಿನ ಅಕ್ರಮಗಳ ಸರಮಾಲೆಯೇ ನಡೆದರೂ ನಿದ್ದೆಯಿಂದೇಳದ ಕಂದಾಯ ಸಚಿವರು ಇದೀಗ ದಿಢೀರ್ ಜ್ಞಾನೋದಯವಾದವರಂತೆ ಆಸ್ತಿ ಸ್ವತ್ತುಗಳಿಗೆ ಇ-ಖಾತ ಕಡ್ಡಾಯಗೊಳಿಸಿ ಸರ್ಕಾರದ ಬೊಕ್ಕಸ ತುಂಬಲು ಮುಂದಾಗಿದ್ದಾರೆ. ಇದು ಸರಿಯಾದ ಕ್ರಮವೇ ಆದರೂ ಅವೈಜ್ಞಾನಿಕ ನಿರ್ವಹಣೆಯಿಂದ ಸಂಕಷ್ಟ ಎದುರಾಗಿದೆ.

ಬೆಂಗಳೂರಲ್ಲಿ ಶೇ.40ರಿಂದ 50ರಷ್ಟು ಅಪಾರ್ಟ್ ಮೆಂಟ್ ಗಳ ತೆರಿಗೆ ಸಂಗ್ರಹ ಇಳಿಕೆಯಾದರೆ, ಉಳಿದೆಡೆ ಶೇ.25-30ರಷ್ಟು ಕಡಿತಗೊಂಡಿದೆ. ಅಕ್ರಮ ಕಟ್ಟಡಗಳು, ಲೇಔಟ್ ಗಳಿಗೆ ಕಡಿವಾಣ ಹಾಕಲು ಯೋಗ್ಯತೆಯಿಲ್ಲದ ಬಿಬಿಎಂಪಿಯಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ನಷ್ಟವಾಗುತ್ತಿರುವುದಷ್ಟೇ ಅಲ್ಲ; ಅಮಾಯಕ ಜನಸಾಮಾನ್ಯರು ಕೂಡ ಪರಿತಪಿಸುವಂತಾಗಿದೆ. ಭೂಮಾಫಿಯಾದವರು ಸಬ್ ರಿಜಿಸ್ಟ್ರಾರ್ ಗಳ ಬಾಯಿಗೆ ಲಂಚ ತುರುಕಿ ಸ್ವತ್ತುಗಳ ನಕಲಿ ದಾಖಲೆಗಳನ್ನು ಸೃಷ್ಟಿಸಿ ದಸ್ತಾವೇಜುಗಳನ್ನು ನೋಂದಣಿ ಮಾಡಿ ಅಮಾಯಕರಿಗೆ ಮಾರಾಟ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ; ಎಗ್ಗಿಲ್ಲದಂತೆ ರೆವಿನ್ಯೂ ಸೈಟ್ ಗಳಲ್ಲಿ ಲೇಔಟ್ ನಿರ್ಮಾಣಗಳನ್ನು ಮಾಡುತ್ತಿದ್ದಾರೆ. ಇದು ಗೊತ್ತಿದ್ದು ಗ್ರಾಮ ಲೆಕ್ಕಾಧಿಕಾರಿಗಳು ಅವರೊಟ್ಟಿಗೆ ಶಾಮೀಲಾಗಿ ಜನಸಾಮಾನ್ಯರನ್ನು ವಂಚಿಸುತ್ತಿದ್ದಾರೆ. ಆದರೆ ಇದನ್ನು ತಡೆಯುವ ಗೋಜಿಗೆ ಬಿಬಿಎಂಪಿ ಹೋಗುತ್ತಿಲ್ಲ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 15 ಲಕ್ಷ ಆಸ್ತಿದಾರರು ಖಾತಾ ದಾಖಲೆಗಳನ್ನೇ ಪಡೆದಿಲ್ಲ. ನಗರ ಸ್ಥಳೀಯ ಸಂಸ್ಥೆಗಳಲ್ಲಿ 30 ಲಕ್ಷ ಹಾಗೂ ಗ್ರಾಮ ಪಂಚಾಯ್ತಿಗಳಲ್ಲಿ 90 ಲಕ್ಷಕ್ಕೂ ಹೆಚ್ಚು ಆಸ್ತಿಗಳಿಗೆ ಖಾತೆಯೇ ಇಲ್ಲ. ಇನ್ನು ಒಂದೇ ನಿವೇಶನವನ್ನು ಹಲವರಿಗೆ ಮಾರಾಟ ಮಾಡಿ ವಂಚಿಸಲಾಗುತ್ತಿದೆ. ಇದನ್ನೆಲ್ಲಾ ತಡೆಯುವ ಯೋಗ್ಯತೆ ಇಲ್ಲದ ಬಿಬಿಎಂಪಿ; ಸರ್ಕಾರಕ್ಕೆ ನಾಮ ತೀಡುತ್ತಿದೆ.

ಈ ಮಧ್ಯೆ ಫೆ.10ರೊಳಗೆ ಇ-ಖಾತಾ ಪ್ರಕ್ರಿಯೆ ಪೂರ್ಣಗೊಳಿಸಲು ಸಿಎಂ ಸಿದ್ದರಾಮಯ್ಯ ಗಡುವು ನೀಡಿದ್ದಾರೆ. ಆದರೆ ಆಗಿರುವ ಅಧ್ವಾನಗಳನ್ನು ಸರಿಪಡಿಸಲು ಸಾಕಷ್ಟು ಸಮಯಾವಕಾಶ ಮಾತ್ರವಲ್ಲ; ಇಚ್ಛಾಶಕ್ತಿಯ ಅಗತ್ಯವೂ ಇದೆ. ನಗರ ಪ್ರದೇಶಗಳ ಆಸ್ತಿಗಳ ಅಕ್ರಮ ನೋಂದಣಿ ತಡೆ, ಆಸ್ತಿ ನೋಂದಣಿ ಮತ್ತು ಖಾತಾ ನಮೂದನ್ನು ಇನ್ನಷ್ಟು ಸರಳಗೊಳಿಸಲು ಕಾವೇರಿ ಮತ್ತು ಇ ಆಸ್ತಿ ತಂತ್ರಾಂಶಗಳ ಸಂಯೋಜನೆ ಕಡ್ಡಾಯಗೊಳಿಸಲಾಗಿದ್ದು; ಕಟ್ಟು ನಿಟ್ಟಾಗಿ ಪಾಲಿಸಬೇಕಿದೆ. ಜೊತೆಗೆ ರೆವಿನ್ಯೂ ನಿವೇಶನಗಳಲ್ಲಿ ಲೇಔಟ್ ಗಳ ನಿರ್ಮಾಣ ಹಾಗೂ ಮಾರಾಟಕ್ಕೆ ಬ್ರೇಕ್ ಹಾಕಬೇಕಿದೆ. ಬಿಬಿಎಂಪಿ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತು; ಜನಪರತೆ ಮೆರೆಯಬೇಕಿದೆ.