ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಸೈಬರ್ ಚೋರರ ಕಂಟಕ ಶುರುವಾಗಿದೆ.

ಹೋಮ್ ಪೇಜ್ಬೆಂಗಳೂರು ನಗರ

1/23/20251 ನಿಮಿಷ ಓದಿ

ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಸೈಬರ್ ಚೋರರ ಕಂಟಕ ಶುರುವಾಗಿದೆ. ಇತ್ತೀಚಿಗೆ ಹೊಸ ಹೊಸ ಹಾದಿ ಹಿಡಿಯುತ್ತಿರೋ ಖದೀಮರು, ಕೋಟಿ ಕೋಟಿ ಹಣ ಸುಲಿಗೆ ಮಾಡುತ್ತಿದ್ದಾರೆ. ಖದೀಮರ ಕೈಚಳಕ ಜನಸಾಮಾನ್ಯರ ನಿದ್ದೆ ಕೆಡಿಸಿದೆ. ವಿದೇಶಿ ಮೂಲದ ವ್ಯಕ್ತಿಗಳು ಹಣ ಲೂಟಿ ಮಾಡುತ್ತಿದ್ದಾರೆ.

ಐಟಿ ಸಿಟಿ ಖ್ಯಾತಿಯ ಬೆಂಗಳೂರು ಇದೀಗ ಸೈಬರ್ ಕ್ರೈಂ ಹಾಟ್ ಸ್ಪಾಟ್ ಆಗ್ತಿದೆ. ದಿನಂಪ್ರತಿ ಆನ್ ಲೈನ್ ವಂಚನೆ ಪ್ರಕರಣಗಳು ಹೆಚ್ಚಾಗ್ತಿದ್ದು, ಸಾರ್ವಜನಿಕರು ಕೋಟಿ ಕೋಟಿ ಕಳೆದುಕೊಳ್ತಿದ್ದಾರೆ. ಇತ್ತೀಚಿಗಷ್ಟೆ ಡಿಜಿಟಲ್ ಅರೆಸ್ಟ್ ಹೆಸರಲ್ಲಿ ಟೆಕ್ಕಿಯೊಬ್ಬನ ಬಳಿ 11 ಕೋಟಿ ಸುಲಿಗೆ ಮಾಡಿದ್ದರು. ವೈಟ್ ಫೀಲ್ಡ್ನಲ್ಲಿ ಟೆಕ್ಕಿಯೊಬ್ಬರಿಗೆ ಮೊಬೈಲ್ ಪೋನ್, ಸಿಮ್ ಕಾರ್ಡ್ ಗಿಫ್ಟ್ ಕೊಟ್ಟು ಎರಡು ಕೋಟಿ ಎಗರಿಸಿದ್ದರು. ಈ ಪ್ರಕರಣಗಳ ಬೆನ್ನತ್ತಿದ ಪೊಲೀಸರಿಗೆ ವಿದೇಶಿ ಚೋರರ ಕೈವಾಡ ಪತ್ತೆಯಾಗಿದೆ.

ಯಲಹಂಕ ಬಳಿ ಟೆಕ್ಕಿಯನ್ನು ಡಿಜಿಟಲ್ ಅರೆಸ್ಟ್ ಮಾಡಿದ್ದ ಖದೀಮರು 11 ಕೋಟಿ ಸುಲಿಗೆ ಮಾಡಿದ್ದರು. ಪೊಲೀಸರು ಕರಣ್, ತರುಣ್, ದವಲ್ ಷಾ ಎಂಬ ಮೂವರನ್ನ ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಪೊಲೀಸರ ವಿಚಾರಣೆ ವೇಳೆ ದುಬೈನಲ್ಲಿ ಕುಳಿತ ಗ್ಯಾಂಗ್ವೊಂದು ಭಾರತೀಯರ ಮೊಬೈಲ್ ನಂಬರ್ ಮತ್ತು ವಿವರಗಳನ್ನ ಸಂಗ್ರಹಿಸಿ ಅಲ್ಲಿಂದಲೇ ವಂಚನೆ ಮಾಡುತ್ತಿರುವುದು ಕಂಡು ಬಂದಿತ್ತು.

ವಂಚನೆ ಜಾಲದ ಹಿಂದೆ ಚೀನಾ ಮತ್ತು ಪಾಕ್ ಮೂಲದ ಕೆಲವು ಸೈಬರ್ ಕ್ರಿಮಿಗಳ ಕೈವಾಡ ಕಂಡು ಬಂದಿದ್ದು, ಭಾರತೀಯರಿಗೆ ಆಮಿಷವೊಡ್ಡಿ ಚೀಟಿಂಗ್ ಮಾಡುತ್ತಿದ್ದರಂತೆ. 2025ರ ಜನವರಿ 20 ರೊಳಗೆ ಸುಮಾರು 950 ಜನರು ಸೈಬರ್ ವಂಚನೆ ಪ್ರಕರಣ ದಾಖಲಿಸಿದ್ದಾರೆ. ಬಹುತೇಕ ಪ್ರಕರಣಗಳಲ್ಲಿ ಡಿಜಿಟಲ್ ಅರೆಸ್ಟ್, ಗಿಫ್ಟ್ ವೋಚರ್, ಎಪಿಕೆ ಫೈಲ್ ಹೀಗೆ ನಾನಾ ಅವತಾರದಲ್ಲಿ ಮೋಸ ಮಾಡಿರುವುದು ಕಂಡು ಬಂದಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್ ಕಮೀಷನರ್ ಬಿ. ದಯಾನಂದ್, ಸೈಬರ್ ಅಪರಾಧಗಳ ಬಗ್ಗೆ ನಿರಂತರವಾಗಿ ನಾವು ಜಾಗೃತಿಗಳನ್ನು ಮೂಡಿಸುತ್ತಿದ್ದೇವೆ. ಸಾಮಾಜಿಕ ಜಾಲತಾಣ, ಜನಸಂಪರ್ಕ ಸಭೆ, ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡ್ತಿದ್ದೇವೆ. 2023ಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಅಂದರೆ 2024ರಲ್ಲಿ ಸೈಬರ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ನಾವು ಮೂಡಿಸುತ್ತಿರುವ ಜಾಗೃತಿ ಸ್ವಲ್ಪ ಮಟ್ಟಿಗೆ ಯಶಸ್ಸು ಕೂಡ ಬಂದಿದೆ ಎಂದು ವಿವರಿಸಿದ್ದಾರೆ.

ಈ ಮೊದಲು ಸಾವಿರ, ಲಕ್ಷಗಳಲ್ಲಿ ಹಣ ಕಳೆದುಕೊಳ್ತಿದ್ದ ಜನ, ಈಗ ಕೋಟಿಗಳ ಲೆಕ್ಕದಲ್ಲಿ ಹಣ ಕಳೆದುಕೊಂಡು ಕಂಗಾಲಾಗಿದ್ದಾರೆ. ಸೈಬರ್ ವಂಚನೆ ಮತ್ತು ಹಣದ ಮೊತ್ತವೂ ಹೆಚ್ಚಾಗಿದ್ದು, ಅಷ್ಟು ದೊಡ್ಡ ಮೊತ್ತವನ್ನ ಖದೀಮರಿಂದ ವಸೂಲಿ ಮಾಡುವುದು ಕೂಡ ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.