ಕೋಟೆಕಾರ್ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ರಾಬರಿ ಕಥೆ?

ದಕ್ಷಿಣ ಕನ್ನಡ

1/19/20251 ನಿಮಿಷ ಓದಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳೂರು ಪ್ರವಾಸದಲ್ಲಿರುವಾಗಲೇ ನಡೆದ ಕೋಟೆಕಾರ್ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ರಾಬರಿ ಕಥೆ ಹಲವಾರು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಪೊಲೀಸರು ಅಲ್ಲಲ್ಲಿ ತಪಾಸಣೆಯಲ್ಲಿ ಇರುವಾಗಲೇ ನಡೆದ ಕೋಟಿ ಕೋಟಿ ರಾಬರಿ ಪೊಲೀಸ್ ಇಲಾಖೆಯ ವೈಫಲ್ಯಕ್ಕೆ ಹಿಡಿದ ಕೈಗನ್ನಡಿ. ಹೆಲ್ಮೆಟ್ ಹಾಕದವರನ್ನು ಹಿಡಿಯುವುದಷ್ಟೇ ತಮ್ಮ ಕೆಲಸ ಎಂದು ಪೊಲೀಸರು ತಿಳಿದುಕೊಂಡಿದ್ದಾರೋ ಏನೋ..? ಮಟ ಮಟ ಮಧ್ಯಾಹ್ನವೇ ಇಂತಹದ್ದೊಂದು ದರೋಡೆ ನಡೆಯುತ್ತದೆ, ಪೊಲೀಸರು ಅಲರ್ಟ್ ಇರುವಾಗಲೇ ಸಲೀಸಾಗಿ ಎಸ್ಕೆಪ್ ಆಗುತ್ತಾರೆ ಅಂದರೆ ಕಾನೂನು ಸುವ್ಯವಸ್ಥೆ ಯಾವ ಮಟ್ಟಿಗಿದೆ ಅನ್ನುವುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕಾ..?

ಶುಕ್ರವಾರದ ದಿನವೇ ಈ ದರೋಡೆ ನಡೆಯುತ್ತದೆ ಎಂದರೆ ಅದೊಂದು ಪ್ರೀ ಪ್ಲಾನ್ ದರೋಡೆ ಅನ್ನುವುದಕ್ಕೆ ಬೇರೊಂದು ಸಾಕ್ಷಿ ಬೇಕಾ? ಅಲ್ಲಿ ಬಹುತೇಕ ಅಂಗಡಿ ಮುಂಗಟ್ಟುಗಳು ಮುಸಲ್ಮಾನರದ್ದು, ಶುಕ್ರವಾರದಂದು ಬೀಗ ಹಾಕಿ ಪ್ರಾರ್ಥನೆಗೆ ತೆರಳುತ್ತಾರೆ. ಆ ಸಮಯದಲ್ಲಿ ಆ ಸ್ಥಳದಲ್ಲಿ ನಿರ್ಜನವಾಗಿರುತ್ತದೆ. ಇದೇ ದರೋಡೆಗೆ ಕರೆಕ್ಟ್ ಸಮಯವೆಂದು ದರೋಡೆಕೋರರು ಅಂದಾಜಿಸಿರಬೇಕು. ಫಿಯೆಟ್ ಕಾರಿನಲ್ಲಿ ಬಂದ ಆಗುಂತಕರು ಹನ್ನೆರಡೇ ನಿಮಿಷದಲ್ಲಿ ಬ್ಯಾಂಕಿಗೆ ನುಗ್ಗಿ ಹನ್ನೆರಡು ಕೋಟಿಯಷ್ಟು ಚಿನ್ನ, ಒಡವೆಗಳನ್ನು ದೋಚಿ ಪರಾರಿಯಾಗಿದ್ದಾರೆ.

ಕೋಟೆಕಾರ್ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ದರೋಡೆ ಕಥೆ ಇದೇ ಮೊದಲೇನೂ ನಡೆದುದಲ್ಲ. ಈ ಹಿಂದೆಯೂ ಇಲ್ಲಿ ದರೋಡೆ ನಡೆದಿತ್ತು. ಅಚ್ಚರಿ ಅಂದರೆ ಆ ದರೋಡೆ ನಡೆಸಿದ್ದು ಬ್ಯಾಂಕಿನವರೇ! ಬ್ಯಾಂಕಿನ ನಿರ್ದೇಶಕರೊಬ್ಬರ ಪತಿಯೇ ಆರೋಪಿಯಾಗಿದ್ದ. ಆದರೆ ಆ ಪ್ರಕರಣದಲ್ಲಿ ದರೋಡೆಕೋರರಿಗೆ ಶಿಕ್ಷೆ ಕೊಡಿಸಲು ಕೋಟೆಕಾರ್ ಸೊಸೈಟಿಯ ಆಡಳಿತ ಮಂಡಳಿ ಮತ್ತು ಸಿಇಓ ಗೆ ಸಾಧ್ಯವಾಗದಿರುವುದು ಮತ್ತೊಮ್ಮೆ ದರೋಡೆಕೊರರಿಗೆ ದರೋಡೆ ಮಾಡಲು ಸಾಧ್ಯ ಆಗಿರುವುದು ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ. ಶುಕ್ರವಾರ ನಡೆದ ರಾಬರಿ ಕಥೆಯು ಕೂಡ ಹಲವಾರು ಅನುಮಾನಕ್ಕೆ ಕಾರಣವಾಗುತ್ತಿದ್ದು, ಕೋಟ್ಯಂತರ ರೂಪಾಯಿ ಒಡವೆ,ನಗದು ಇರುವಾಗ ಸಿಸಿಟಿವಿ ಪರ್ಫೆಕ್ಟ್ ಇಡಬೇಕಾದುದು ಬ್ಯಾಂಕಿನವರ ಕರ್ತವ್ಯ. ಆದರೆ ಲಾಕರ್ ಒಳಗಡೆ ಸಿಸಿಟಿವಿ ಸುಸ್ಥಿತಿಯಲ್ಲಿ ಇಲ್ಲದಿರುವುದು ದರೋಡೆಕೋರರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದಲೇ ಸೊಸೈಟಿಯ ಒಳಗಿಂದಲೇ ಚಮತ್ಕಾರ ಏನಾದರೂ ನಡೆದಿದೆಯಾ? ಅನ್ನುವ ಅನುಮಾನ ಇದೀಗ ಎದ್ದಿದೆ.

ಕೋಟೆಕಾರ್ ಸೊಸೈಟಿಗೆ ವಾರದ ಹಿಂದೆಯಷ್ಟೇ ಚುನಾವಣೆ ನಡೆದು ಹೊಸ ಅಧ್ಯಕ್ಷರು ಅಧಿಕಾರ ಪಡೆದಿದ್ದರು. ಇಲ್ಲಿ ಎರಡು ಬಣಗಳ ನಡುವೆ ತಿಕ್ಕಾಟ ಈ ಹಿಂದಿನಿಂದಲೂ ಇದೆ. ಸೊಸೈಟಿ ಅಧಿಕಾರಕ್ಕಾಗಿ ದೊಡ್ಡ ಖೇಲ್ ನಡೆಯುತ್ತಲೇ ಇತ್ತು. ಸಾಮಾನ್ಯ ಜನರು ಕಟ್ಟಿದ ಸೊಸೈಟಿಗೆ ದುಬಾರಿ ಮೊತ್ತದ ಶೇರ್ ಪಡೆದವರಿಗಷ್ಟೇ ಚುನಾವಣೆಯಲ್ಲಿ ಮತ ಚಲಾಯಿಸುವ ಅವಕಾಶ ಕಲ್ಪಿಸಿ ಸಾಮಾನ್ಯ ಜನರು ಚುನಾವಣೆಯಲ್ಲಿ ಮತ ಚಲಾವಣೆ ಮಾಡದಂತೆ ತಡೆಯುವ ಹುನ್ನಾರ ನಡೆಸಿದ್ದು ಮಾತ್ರವಲ್ಲ ಈ ಬಾರಿ ಬ್ಯಾಂಕಿನ ಶ್ರೇಯೋಭಿವೃದ್ಧಿ ಬಯಸುವ ತಂಡವೊಂದು ಚುನಾವಣೆಗೆ ಸ್ಪರ್ಧಿಸಿತ್ತು ಆದರೆ ಅಧ್ಯಕ್ಷ ಸ್ಥಾನ ಬಿಟ್ಟುಕೊಡಲು ತಯಾರಿಲ್ಲದ ಎರಡು ತಂಡಗಳ ನಡುವಿನ ಕಿತ್ತಾಟದಿಂದ ಒಂದು ಬಣ ದ ಕೈಗೆ ಅಧಿಕಾರ ದಕ್ಕಿತು. ಧೋ ನಂಬರ್ ದಂಧೆಕೋರರ ಹತೋಟಿಗೆ ಬ್ಯಾಂಕ್ ಸಿಲುಕಿದ ನಂತರ ಕೋಟಿ ಕೋಟಿ ರಾಬರಿ ನಡೆದಿರುವುದು ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇಂತಹ ಪ್ರಕರಣಗಳಲ್ಲಿ ರಾಜ್ಯ ಪೊಲೀಸ್ ಹಿರಿಯ ಅಧಿಕಾರಿಗಳು ತಂಡವನ್ನು ರಚಿಸಿ ಶ್ವಾನವನ್ನು ಕರೆದುಕೊಂಡು ಬಂದು ಪತ್ತೆ ಹಚ್ಚುವ ಕಾರ್ಯಕ್ರಮಕ್ಕೆ ಕೈ ಹಾಕಿ ಮಾಧ್ಯಮಗಳ ಮುಂದೆ ತೋರಿಸುತ್ತಾರೆ. ಆ ಬಳಿಕ ಈ ಪ್ರಕರಣದ ದಾರಿ ಅಥವಾ ಅದರ ತನಿಖೆಯ ವರದಿಯನ್ನು ನೀಡುವುದನ್ನು ಮರೆತುಬಿಡುತ್ತಾರೆ. ಮಾನ್ಯ ಗೃಹ ಸಚಿವರೇ ಮುಂದಿನ ದಿನಗಳಲ್ಲಾದರೂ ಇಂತಹ ಪ್ರಕರಣಗಳನ್ನು ಗಂಭೀರವಾಗಿ ತೆಗೆದುಕೊಂಡು ರಾಜ್ಯದಲ್ಲಿ ನಡೆಯುವಂತಹ ಎಟಿಎಂ ದರೋಡೆ, ಬ್ಯಾಂಕ್ ದರೋಡೆ ಮತ್ತು ಜನರಿಂದ ಲೂಟಿ ಮಾಡುವ ಖದೀಮರಿಂದ ಸಾರ್ವಜನಿಕರನ್ನು ಹಾಗೂ ಸರ್ಕಾರದ ಹಣವನ್ನು ರಕ್ಷಿಸುತ್ತೀರಾ?