ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಬಳಕೆ ಆರೋಪ ಸಿಟಿ ರವಿಗೆ ಹೈಕೋರ್ಟ್ ರಿಲೀಫ್
ನ್ಯಾಯಾಲಯಹೋಮ್ ಪೇಜ್
ಬೆಂಗಳೂರು:
ವಿಧಾನಪರಿಷತ್ತಿನಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದಲ್ಲಿ ಬಿಜೆಪಿ ಎಂಎಲ್ಸಿ ಸಿ.ಟಿ.ರವಿಗೆ ಕರ್ನಾಟಕ ಹೈಕೋರ್ಟ್ ಗುರುವಾರ ಬಿಗ್ ರಿಲೀಫ್ ನೀಡಿದೆ. ಸಿ.ಟಿ.ರವಿ ವಿರುದ್ಧ ಜನವರಿ ೩೦ ರವರೆಗೆ ಬಲವಂತದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಸೂಚಿಸಿದೆ.
ಶಾಸಕರ ನಡುವೆ ಸದನದಲ್ಲಿ ನಡೆದ ವಿಚಾರಕ್ಕೆ ವಿನಾಯಿತಿ ಇದೆ ಎಂದು ಸಿ.ಟಿ.ರವಿ ಪರವಾಗಿ ಹಿರಿಯ ವಕೀಲ ಸಿವಿ ನಾಗೇಶ್ ವಾದ ಮಂಡಿಸಿದರು. ಇದಕ್ಕೆ ಪ್ರತಿಯಾಗಿ ಕ್ರಿಮಿನಲ್ ಕೃತ್ಯಗಳಿಗೆ ವಿನಾಯಿತಿ ಇಲ್ಲವೆಂದು ಎಸ್ಪಿಪಿ ಬಿಎ ಬೆಳ್ಳಿಯಪ್ಪ ವಾದ ಮಂಡಿಸಿದರು.
ತನಿಖೆ ವ್ಯಾಪ್ತಿಯ ಪ್ರಶ್ನೆಯನ್ನು ನಾವು ತೀರ್ಮಾನಿಸಬೇಕಿದೆ ಎಂದ ಹೈಕೋರ್ಟ್, ಬಲವಂತದ ಕ್ರಮ ಕೈಗೊಳ್ಳದಂತೆ ಆದೇಶ ನೀಡಿದೆ. ಸಿಟಿ ರವಿ ವಾಯ್ಸ್ ಸ್ಯಾಂಪಲ್ ತೆಗೆದುಕೊಳ್ಳಬೇಕಿದೆ ಎಂದು ಎಸ್ಪಿಪಿ ವಾದ ಮಂಡಿಸಿದರು. ಆದಾಗ್ಯೂ ಮುಂದಿನ ಪ್ರಶ್ನೆ ಬಗ್ಗೆ ತೀರ್ಮಾನಿಸುವವರೆಗೆ ಕಾಯುವಂತೆ ಹೈಕೋರ್ಟ್ ಸೂಚನೆ ನೀಡಿತು.
ಏನಿದು ಪ್ರಕರಣ?
ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ವಿಧಾನ ಪರಿಷತ್ತಿನಲ್ಲಿ ಸಿ.ಟಿ ರವಿ ಸಚಿವೆ ಹೆಬ್ಬಾಳ್ಕರ್ ಅವರನ್ನು ಅಶ್ಲೀಲವಾಗಿ ನಿಂದಿಸಿದ್ದಾರೆ ಎಂದು ಆರೋಪವಿದೆ. ಆದರೆ ಈ ಆರೋಪವನ್ನು ಸಿ.ಟಿ ರವಿ ಅಲ್ಲಗಳದಿದ್ದಾರೆ. ಮತ್ತೊಂದೆಡೆ, ಅಶ್ಲೀಲವಾಗಿ ನಿಂದಿಸಿರುವುದು ಸರ್ಕಾರಿ ಟಿವಿಯಲ್ಲಿ ದಾಖಲಾಗಿರುವುದು ಇತ್ತೀಚೆಗೆ ದೃಢಪಟ್ಟಿದೆ. ಆದರೆ ಅದು ಸಿಟಿ ರವಿ ಅವರ ಧ್ವನಿಯೇ ಎಂಬುದನ್ನು ಖಚಿತಪಡಿಸಲು ಅವರ ವಾಯ್ಸ್ ಸ್ಯಾಂಪಲ್ ಕೋರಲಾಗಿತ್ತು. ವಾಯ್ಸ್ ಸ್ಯಾಂಪಲ್ ನೀಡಲು ಅವರು ನಿರಾಕರಿಸಿದ್ದರು. ಈ ವಿಚಾರದ ಬಗ್ಗೆಯೂ ಹೈಕೋರ್ಟ್ನಲ್ಲಿ ವಾದ ಪ್ರತಿವಾದ ನಡೆಯುತ್ತಿದೆ. ಪ್ರಕರಣದ ತನಿಖೆಯನ್ನು ಸಿಐಡಿ ನಡೆಸುತ್ತಿದೆ.
ಘಟನೆ ರಾಜ್ಯದಾದ್ಯಂತ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿತ್ತು. ಸಿ.ಟಿ.ರವಿ ಅವರನ್ನು ಬಂಧಿಸಿದ್ದ ಬೆಳಗಾವಿ ಪೊಲೀಸರು ರಾತ್ರಿ ಇಡೀ ಅವರನ್ನು ಪೊಲೀಸ್ ವಾಹನದಲ್ಲಿ ಸುತ್ತಾಡಿಸಿದ್ದರು. ಈ ವಿಚಾರವಾಗಿ ಸರ್ಕಾರದ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿತ್ತು. ಸಿ.ಟಿ ರವಿ ಅವರನ್ನು ಎನ್ಕೌಂಟರ್ ಮಾಡಲು ಸರ್ಕಾರ ಸಂಚು ಹೂಡಿತ್ತು ಎಂದು ಕೆಲವು ಮಂದಿ ಬಿಜೆಪಿ ನಾಯಕರು ಗಂಭೀರ ಆರೋಪ ಮಾಡಿದ್ದರು.