ಮತ್ತೆ ಕೋಟಿ ಒಡೆಯನಾದ ಮಾದಪ್ಪ – 30 ದಿನಗಳಲ್ಲಿ 2.29 ಕೋಟಿ ಕಾಣಿಕೆ ಸಂಗ್ರಹ

ಚಾಮರಾಜನಗರಹೋಮ್ ಪೇಜ್

1/24/20251 ನಿಮಿಷ ಓದಿ

ಚಾಮರಾಜನಗರ: ಹನೂರು ತಾಲ್ಲೂಕಿನ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಎಣಿಕೆ ನಡೆದಿದ್ದು, ಮಾದಪ್ಪ ಮತ್ತೆ ಕೋಟಿ ಒಡೆಯನಾಗಿದ್ದಾನೆ. ಹುಂಡಿ ಹಣ ಎಣಿಕೆಯಲ್ಲಿ ಈ ಬಾರಿ 30 ದಿನಗಳಲ್ಲಿ 2.29 ಕೋಟಿ ರೂ. ಸಂಗ್ರಹವಾಗಿದೆ.

ಮಲೆ ಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಸಾಲೂರು ಬೃಹನ್ ಮಠದ ಅಧ್ಯಕ್ಷರಾದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿ ಅವರ ಸಮ್ಮುಖದಲ್ಲಿ ಹುಂಡಿಗಳನ್ನು ತೆರೆಯಲಾಯಿತು. ಬಳಿಕ ಸಿಸಿ ಕ್ಯಾಮೆರಾ ಕಣ್ಣಾವಲಿನಲ್ಲಿ ಎಣಿಕೆ ಕಾರ್ಯ ಪ್ರಾರಂಭಿಸಲಾಯಿತು. ಎಣಿಕೆ ಕಾರ್ಯವು ಸಂಜೆ 8 ಗಂಟೆಯವರೆಗೂ ನಡೆಯಿತು.

ಹೊಸ ವರ್ಷದ ಮೊದಲ ತಿಂಗಳು ಅಮಾವಾಸ್ಯೆ, ಹೊಸವರ್ಷದ ರಜಾ ದಿನ, ಸಂಕ್ರಾಂತಿ ಹಬ್ಬ, ಶಬರಿಮಲೆ, ಓಂ ಶಕ್ತಿ ಯಾತ್ರಾರ್ಥಿಗಳು ಹಾಗೂ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಶಕ್ತಿ ಯೋಜನೆಯ ಉಚಿತ ಪ್ರಯಾಣದ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿದ್ದರು.

ಈ ವೇಳೆ ಹರಕೆಯ ರೂಪದಲ್ಲಿ 2,29,67,216 ನಗದು 18 ಗ್ರಾಂ ಚಿನ್ನ ಹಾಗೂ 1,200 ಬೆಳ್ಳಿ ಪದಾರ್ಥಗಳನ್ನು ಹುಂಡಿಗೆ ಹಾಕಿದ್ದಾರೆ. ಅಲ್ಲದೇ 4,21,505 ರೂ. ಮೌಲ್ಯದ ವಿದೇಶಿ ನೋಟುಗಳು, ಚಲಾವಣೆಯಲ್ಲಿ ಇಲ್ಲದ 2,000 ಮುಖಬೆಲೆಯ 17 ನೋಟುಗಳು ಹುಂಡಿಯಲ್ಲಿ ಎಣಿಕೆ ವೇಳೆ ಸಿಕ್ಕಿವೆ.

ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಇ ರಘು, ಉಪ ಕಾರ್ಯದರ್ಶಿ ಚಂದ್ರಶೇಖರ್, ಲೆಕ್ಕ ಅಧೀಕ್ಷಕ ಗುರು ಮಲ್ಲಯ್ಯ, ಚಾಮರಾಜನಗರ ಜಿಲ್ಲಾಡಳಿತ ಕಚೇರಿಯ ಶಶಿಕುಮಾರ್, ಬ್ಯಾಂಕ್ ಆಫ್ ಬರೋಡ ನೌಕರರು ಹಾಗೂ ಪ್ರಾಧಿಕಾರದ ಸಿಬ್ಬಂದಿ ಎಣಿಕೆ ಕಾರ್ಯದಲ್ಲಿ ಭಾಗವಹಿಸಿದ್ದರು.