ಎಂಎಸ್ ಪಿ ಹೆಚ್ಚಳ, ಸಕ್ಕರೆ ರಫ್ತು: ಕೇಂದ್ರ ಸಚಿವ ಪ್ರಲ್ಹಾದ ಜೋಶಿಗೆ ನಿರಾಣಿ ಅಭಿನಂದನೆ

ಹೋಮ್ ಪೇಜ್

1/25/20251 ನಿಮಿಷ ಓದಿ

ಎಥೆನಾಲ್ ನಿಂದ ಬರುವ ಆದಾಯದ ಶೇ. 70-75ರಷ್ಟು ಭಾಗ ರೈತರಿಗೆ ಪಾವತಿಸಲು ಕೇಂದ್ರ ಸಮಿತಿ ಶಿಫಾರಸು

ಬೆಂಗಳೂರು, ಜ. 24: ಸಕ್ಕರೆ ಕಾರ್ಖಾನೆಗಳಿಗೆ ಪೂರೈಸುವ ಕಬ್ಬಿಗೆ ಎಂಎಸ್ ಪಿ ಹೆಚ್ಚಿಸಿರುವುದು ಮತ್ತು ಸಕ್ಕರೆ ರಫ್ತಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿರುವುದಕ್ಕೆ ಕಾರಣರಾದ ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಅವರಿಗೆ ರಾಜ್ಯದ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರ ಪರವಾಗಿ ಮಾಜಿ ಸಚಿವ, ರಾಜ್ಯ ಬಿಜೆಪಿ ಹಿರಿಯ ಉಪಾಧ್ಯಕ್ಷ ಮುರುಗೇಶ್ ನಿರಾಣಿ ಅಭಿನಂದನೆ ಸಲ್ಲಿಸಿದ್ದಾರೆ.

ನಗರದ ಖಾಸಗಿ ಹೋಟೆಲ್ ನಲ್ಲಿ ಶುಕ್ರವಾರ ರಾಜ್ಯದ ಸಕ್ಕರೆ ಕಾರ್ಖಾನೆ ಮಾಲೀಕರ ಜತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮತನಾಡಿದ ಅವರು, "ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರಿಬ್ಬರಿಗೂ ಅನುಕೂಲವಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ಮತ್ತು ಇದಕ್ಕೆ ಕಾರಣರಾದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರಶಂಸಾರ್ಹರು", ಎಂದು ಹೇಳಿದರು.

"ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳು ಹೆಚ್ಚಿನ ದರ ನೀಡಿದ್ದರೂ ಮಾರುಕಟ್ಟೆಯಲ್ಲಿ ಸಕ್ಕರೆ ದರ ಕಡಿಮೆಯಾಗಿರುವುದರಿಂದ ಕಾರ್ಖಾನೆ ಮಾಲೀಕರು ಸಮಸ್ಯೆಗೆ ಸಿಲುಕಿದ್ದರು. ಸಕ್ಕರೆ ರಫ್ತಿಗೆ ಅವಕಾಶ ಕಲ್ಪಿಸುವ ಮೂಲಕ ಮಾರುಕಟ್ಟೆಯಲ್ಲಿ ಸಕ್ಕರೆ ದರ ಏರಿಕೆಗೆ ಅವಕಾಶ ಮಾಡಿಕೊಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಲಾಗಿತ್ತು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರನ್ನೂ ಭೇಟಿಯಾಗಿ ಮನವಿ ಸಲ್ಲಿಸಿದ್ದೆವು. ಇದೀಗ 10 ಲಕ್ಷ ಟನ್ ಸಕ್ಕರೆ ರಫ್ತಿಗೆ ಕೇಂದ್ರ ಅನುಮತಿ ನೀಡಿದ್ದು, ಇದರಿಂದ ಸಕ್ಕರೆ ದರ ಹೆಚ್ಚಾಗಿ ಕಾರ್ಖಾನೆಗಳಿಗೆ ಅನುಕೂಲವಾಗಲಿದೆ. ಅದೇ ರೀತಿ ಎಂಎಸ್ ಪಿ ಹೆಚ್ಚಿಸಿರುವುದು ರೈತರಿಗೆ ಲಾಭ ತರಲಿದೆ", ಎಂದರು.

"ಪ್ರಸ್ತುತ ಪೆಟ್ರೋಲ್ ಗೆ ಮಾತ್ರ ಎಥೆನಾಲ್ ಮಿಶ್ರಣ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ಡೀಸೆಲ್ ಗೂ ಇದನ್ನು ಮಿಶ್ರಣ ಮಾಡಲಾಗುವುದು. 10 ವರ್ಷದ ಬಳಿಕ ಪೆಟ್ರೋಲ್ ಮತ್ತು ಡೀಸೆಲ್ ಬದಲು ಎಲೆಕ್ಟ್ರಿಕ್ ಮತ್ತು ಎಥೆನಾಲ್ ನಿಂದ ಓಡುವ ವಾಹನಗಳು ಬರುತ್ತವೆ. ಅದೇ ರೀತಿ ವಿಮಾನಗಳಿಗೂ ಎಥೆನಾಲ್ ಬಳಕೆ ಮಾಡಲು ಅವಕಾಶ ಇದೆ. ಜೆಟ್ ಫ್ಯೂಯಲ್ (ವಿಮಾನಗಳ ಪೆಟ್ರೋಲ್)ಗೆ ಶೇ. 5ರಷ್ಟು ಎಥೆನಾಲ್ ಮಿಶ್ರಣ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಈ ಕೆಲಸ ಆಗಲಿದ್ದು, ಅದಕ್ಕೆ ಬೇಕಾದ ಸಿದ್ಧತೆ ನಡೆಯುತ್ತಿದೆ. ಹೀಗಾಗಿಎಥೆನಾಲ್ ಉತ್ಪಾದನೆಗೆ ಇನ್ನಷ್ಟು ಪ್ರೋತ್ಸಾಹ ನೀಡಬೇಕು", ಎಂದು ಮನವಿ ಮಾಡಿದರು.

"ಸಕ್ಕರೆ ಕಾರ್ಖಾನೆಗಳಿಗೆ ಎಥೆನಾಲ್‌ನಿಂದ ಬರುವ ಆದಾಯದಲ್ಲಿ ರೈತರಿಗೆ ಹೆಚ್ಚು ಪಾಲು ನೀಡಲಾಗುತ್ತಿದೆ. ಕೇಂದ್ರ ಸರ್ಕಾರ ನೇಮಿಸಿರುವ ಸಮಿತಿಯು ಸಲ್ಲಿಸಿರುವ ವರದಿಯಲ್ಲಿ ಎಥೆನಾಲ್ ನಿಂದ ಬರುವ ಆದಾಯದಲ್ಲಿ ಶೇ. 70ರಿಂದ ಶೇ. 75ರಷ್ಟನ್ನು ರೈತರಿಗೆ ಮತ್ತು ಶೇ. 25ನ್ನು ಕಂಪನಿ ಮಾಲೀಸರಿಗೆ ನೀಡಲು ಶಿಫಾರಸು ಮಾಡಿದೆ", ಎಂದು ತಿಳಿಸಿದರು.

ವಿದ್ಯುತ್ ಬಿಲ್ ಪಾವತಿಗೆ ಆಗ್ರಹ

ಕೋ-ಜನರೇಷನ್ ಮೂಲಕ ಸಕ್ಕರೆ ಕಾರ್ಖಾನೆಗಳು ಉತ್ಪಾದಿಸಿ ನೀಡಿದ ವಿದ್ಯುತ್ತಿಗೆ ರಾಜ್ಯ ಸರ್ಕಾರ ಸಕಾಲದಲ್ಲಿ ಬಿಲ್ ಪಾವತಿ ಮಾಡಬೇಕು ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಆಗ್ರಹಿಸಿದ್ದಾರೆ.

ಸಕ್ಕರೆ ಕಾರ್ಖಾನೆಗಳಲ್ಲಿ ಕೋ-ಜನರೇಷನ್ ಮೂಲಕ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದ್ದು, ಈ ವಿದ್ಯುತ್ತನ್ನು ಸರ್ಕಾರಕ್ಕೆ ಮಾರಾಟ ಮಾಡಲಾಗುತ್ತಿದೆ. ಆದರೆ, ಸರ್ಕಾರ ಆರು ತಿಂಗಳಾದರೂ ಹಣ ಪಾವತಿಸದ ಕಾರಣ ಸಕ್ಕರೆ ಕಾರ್ಖಾನೆಗಳು ಸಮಸ್ಯೆಗೆ ಸಿಲುಕಿವೆ. ಸರ್ಕಾರ ಕೂಡಲೇ ವಿದ್ಯುತ್ ಬಾಕಿ ಬಿಲ್ ಪಾವತಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.