ದೇವಾಲಯ ನೌಕರರಿಗೆ ಆರು ಅಥವಾ ಏಳನೇ ವೇತನ ಭತ್ಯೆ ಜಾರಿ ಮಾಡಲು ಆಯುಕ್ತರ ನಿರ್ಲಕ್ಷ್ಯ


ಮುಜರಾಯಿ ಇಲಾಖೆಯಲ್ಲಿ ಸುಮಾರು ೧೧೦೦ಕ್ಕಿಂತ ಹೆಚ್ಚು ಅದರಲ್ಲಿ ಈಗ ಸುಮಾರು ೩೦೦ ರಿಂದ ೪೦೦ ದೇವಾಲಯ ನೌಕರರು ನಿವೃತ್ತಿ ಹೊಂದಿರುತ್ತಾರೆ.ಉಳಿದ ದೇವಾಲಯ ನೌಕರರು ಕೆಲಸ ನಿರ್ವಹಿಸುತ್ತಿದ್ದು ಇಂತಹ ದೇವಾಲಯ ನೌಕರರಲ್ಲಿ ಸುಮಾರು ೪೨ ಜನಕ್ಕೆ ಮಾತ್ರ ಸರ್ಕಾರಿ ಶ್ರೇಣಿ ನೀಡುತ್ತಿದ್ದು ಉಳಿದವರಿಗೆ ಸಿಗುತ್ತಿಲ್ಲ ಎಂಬ ಆರೋಪವು ಇರುತ್ತದೆ. ಮುಜರಾಯಿ ಸಚಿವರಾದ ಶ್ರೀ ರಾಮಲಿಂಗಾರೆಡ್ಡಿರವರ ನೇತೃತ್ವದಲ್ಲಿ ಈಗಾಗಲೇ ಸುಮಾರು ೪-೫ ದೇವಾಲಯಗಳು ಪ್ರಾಧಿಕಾರ ರಚಿಸಿದ್ದು ಇಂತಹ ದೇವಾಲಯಗಳಲ್ಲಿ ಕೆಲಸ ಮಾಡುವ ದೇವಾಲಯ ನೌಕರರಿಗೆ ೭ನೇ ವೇತನ ಭತ್ಯೆ ಮಂಜೂರು ಮಾಡಿ ಪಡೆದಿರುತ್ತಾರೆ. ಆದರೆ ಉಳಿದಂತಹ ದೇವಾಲಯ ನೌಕರರಿಗೆ ದೇವಾಲಯದ ವರಮಾನದಲ್ಲಿ ಶೇಕಡ ೩೫ ಮೀರದಿದ್ದರೂ ಅವರಿಗೆ ನೀಡದೇ ಇರುವುದು ನೋವಿನ ಸಂಗತಿಯಾಗಿರುತ್ತದೆ. ಸರಕಾರದ ಆದೇಶದಂತೆ ಶೇ.೨೨ರಲ್ಲಿ ಶೇ.೧೭%ರಷ್ಟು ತಾತ್ಕಾಲಿಕವಾಗಿ ಭತ್ಯೆ ನೀಡಿರುತ್ತಾರೆ. ನಿಯಮ ೮ರಲ್ಲಿರುವಂತಹ ಸುಮಾರು ೩೦೦೦ ಅರ್ಚಕರು ಹಾಗೂ ದೇವಾಲಯ ಸಿಬ್ಬಂದಿಗಳಿಗೆ ಶೇ.೨.೫ರಷ್ಟು ಭತ್ಯೆ ನೀಡಿ ಸರಕಾರದತ್ತ ಮುಖ ತೋರಿಸಿರುತ್ತಾರೆ.
ಕೇಂದ್ರ ಕಚೇರಿಯಲ್ಲಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಬಹುಶಃ ಮುಜರಾಯಿ ಆಯುಕ್ತರನ್ನು ದಿಕ್ಕು ತಪ್ಪಿಸುತ್ತಿರುತ್ತಾರೆಂಬ ಮಾತುಗಳು ಇರುತ್ತದೆ. ಕಾರಣ ಮುಜರಾಯಿ ಆಯುಕ್ತರು ವರ್ಷದ ಆಯವ್ಯಕ್ಕೆ ಅವರೇ ಮಂಜೂರು ಮಾಡುವ ಹಕ್ಕಿದ್ದರೂ ಇಂತಹ ಪ್ರಸ್ತಾವಣೆಯನ್ನು ಮಂಜೂರು ಮಾಡಲು ಸರ್ಕಾರಕ್ಕೆ ಕಳುಹಿಸಿರುತ್ತಾರೆ. ಈಗಾಗಲೇ ಸವದತ್ತಿ ಎಲ್ಲಮ್ಮ, ಕೊಪ್ಪಳದ ಹುಲಿಗೆಮ್ಮ, ಮೈಸೂರಿನ ಚಾಮುಂಡಿ, ಯಡಿಯೂರಿನ ಸಿದ್ದಲಿಂಗೇಶ್ವರ, ದೇವಾಲಯಗಳಲ್ಲಿ ಕೆಲಸ ಮಾಡುತ್ತಿರುವ ದೇವಾಲಯ ನೌಕರರಿಗೆ ೭ನೇ ವೇತನ ಮಂಜೂರಾತಿಯನ್ನು ನೀಡಿ ಈಗಾಗಲೇ ಆ ಭಾಗದ ನೌಕರರು ಸಂಭ್ರಮದಿಂದ ಇರುತ್ತಾರೆ ಎಂಬ ಸುದ್ದಿಯಿರುತ್ತದೆ. ಆದರೆ ಉಳಿದಂತಹ ನೌಕರರಿಗೆ ಅನ್ಯಾಯ ಆಗಿರುವುದನ್ನು ಯಾರೊಬ್ಬರು ಖಂಡನೆ ಮಾಡುತ್ತಿಲ್ಲ. ಮಾನ್ಯ ಆಯುಕ್ತರೇ ಒಂದು ವೇಳೆ ನಿಮಗೆ ನಿಮ್ಮ ವ್ಯಾಪ್ತಿ ಯಾವುದು ಎಂದು ತಿಳಿಯದಿದ್ದಲ್ಲಿ ತಾವುಗಳು ದಯಮಾಡಿ ರಾಜ್ಯದಲ್ಲಿರುವ ‘ಎ’ ಮತ್ತು ‘ಬಿ’ ವರ್ಗದ ಎಲ್ಲಾ ದೇವಾಲಯಗಳನ್ನು ಪ್ರಾಧಿಕಾರ ರಚಿಸಿ ಕೈ ಬಿಟ್ಟರೆ ಒಳ್ಳೆಯದಾಗುತ್ತದೆ.
ನಿಮ್ಮ ಯೋಗ್ಯತೆಗೆ ಕಾನೂನು ಏನೆಂದು ತಿಳಿದುಕೊಂಡಿಲ್ಲ ಅಥವಾ ತಜ್ಞರನ್ನು ಕರೆದು ಈ ವಿಚಾರದ ಬಗ್ಗೆ ಯಾವ ರೀತಿಯಲ್ಲಿ ಆದೇಶಗಳನ್ನು ಮಾಡಿರುತ್ತಾರೆಂಬ ಮಾಹಿತಿಯನ್ನು ಪಡೆಯದೆ ಕೆಳಗಿನವರು ಒತ್ತು ಹಾಕಿದ ಕಡತವನ್ನು ಸರ್ಕಾರಕ್ಕೆ ಕಳುಹಿಸಿ ಕೈ ತೊಳೆದುಕೊಂಡರೆ ಅದು ನ್ಯಾಯವೇ ಸ್ವಾಮಿ? ಮಾನ್ಯ ಮುಜರಾಯಿ ಸಚಿವರಾದ ಶ್ರೀ ರಾಮಲಿಂಗಾರೆಡ್ಡಿರವರು ಕಾಲಿಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಓಡಾಡದಂತೆ ಆಗಿರುತ್ತದೆ. ಇಂತಹ ಸಂದರ್ಭದಲ್ಲಿ ಮುಜರಾಯಿ ಇಲಾಖೆಯ ದುರಾಡಳಿತ, ದುರ್ವ್ಯವಸ್ಥೆ ಬಗ್ಗೆ ಅವರು ತಲೆಕೆಡಿಸಿಕೊಳ್ಳುವಂತೆ ಕಾಣಿಸುತ್ತಿಲ್ಲ. ರಾಜ್ಯದಲ್ಲಿರುವ ಮುಜರಾಯಿ ದೇವಾಲಯಗಳಲ್ಲಿ ದೇವಾಲಯ ನೌಕರರು, ಅರ್ಚಕರು, ಆಗಮಿಕರು, ಮತ್ತು ಪರಿಚಾರಕರು ಇಲ್ಲದಿದ್ದರೆ ಸರ್ಕಾರಿ ಅಧಿಕಾರಿಗಳಿಗೆ ಕೆಲಸವೇ ಇರುವುದಿಲ್ಲ. ಈಗಾಗಲೇ ದೇವಾಲಯಗಳನ್ನು ಖಾಸಗೀಕರಣ ಮಾಡಲು ಹಲವು ಮಾತುಗಳು ಮಾಧ್ಯಮಗಳಲ್ಲಿ ಕೇಳಿ ಬರುತ್ತಿದ್ದು ಅದು ಜಾರಿಯಾದಲ್ಲಿ ಬಹುಶಃ ದೇವಾಲಯ ನೌಕರರಿಗೆ ಹಾಗೂ ಅರ್ಚಕರಿಗೆ ಒಳ್ಳೆಯದಾಗಬಹುದೇನೋ? ಮಾನ್ಯ ಮುಜರಾಯಿ ಸಚಿವರೇ ದೇವಾಲಯ ನೌಕರರಿಗೆ ಕೂಡಲೇ ಬಾಕಿಯಿರುವ ೬ನೇ ವೇತನ ಭತ್ಯೆ ಮತ್ತು ೭ನೇ ವೇತನ ಭತ್ಯೆಯನ್ನು ರಾಜ್ಯದಲ್ಲಿರುವ ನಿಮ್ಮ ದೇವಾಲಯ ನೌಕರರಿಗೆ ನೀಡಿ ಒಳ್ಳೆಯ ಹೆಸರನ್ನು ಸರ್ಕಾರದ ನಿಯಮಾನುಸಾರ ಗಿಟ್ಟಿಸಿಕೊಳ್ಳಿ ಎಂದು ನಮ್ಮ ಪತ್ರಿಕಾ ತಂಡದ ಸಲಹೆಯಾಗಿರುತ್ತದೆ. ಒಂದು ವೇಳೆ ತಾವುಗಳು ಇದನ್ನು ಗಂಭೀರವಾಗಿ ಪರಿಗಣಿಸದೇ ಇದ್ದಲ್ಲಿ ಬಹುಶಃ ನಿಮಗೆ ಆ ದೇವರ ಶಾಪ ತಟ್ಟದೇ ಇರುವುದಿಲ್ಲ. ಎಚ್ಚರ ವಹಿಸಿ ದೇವಾಲಯ ನೌಕರರ ವಿಚಾರದಲ್ಲಿ ಸೂಕ್ತ ಕ್ರಮ ಜರುಗಿಸಿ ಆದೇಶವನ್ನು ಮಾಡಲಿ ಎಂದು ನೌಕರರ ಬೇಡಿಕೆಯಾಗಿರುತ್ತದೆ.

