ಒಂದು ದೇಶ, ಒಂದು ಚುನಾವಣೆ
ಚುನಾವಣೆ ವೆಚ್ಚ ಯಾರಪ್ಪನ ದುಡ್ಡು?


ಪ್ರಸ್ತುತ ದೇಶದಲ್ಲಿ `ಒಂದು ದೇಶ, ಒಂದು ಚುನಾವಣೆ' ಮಸೂದೆ ಬಹು ಚರ್ಚೆಯಲ್ಲಿದೆ. ದೇಶದಲ್ಲಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಮಸೂದೆ ಇದಾಗಿದೆ. ಈ ವಿಧೇಯಕ ಜಾರಿಗೆ ಪರ-ವಿರೋಧದ ಮಾತು ಜೋರಾಗಿದೆ. ಬಿಜೆಪಿಯ ಪ್ರಮುಖ ಕಾರ್ಯಸೂಚಿಯನ್ನು ಜಾರಿ ತರಲು ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟದಲ್ಲೇ ಒಮ್ಮತದ ಅಭಿಪ್ರಾಯ ಮೂಡಿಲ್ಲ. ಕಳೆದ ತಿಂಗಳು ಕೇಂದ್ರ ಸರ್ಕಾರ ಈ ಮಸೂದೆಯನ್ನು ಮಂಡಿಸಿತು. ಆದರೆ, ಅಂಗೀಕಾರಕ್ಕೆ ಬೇಕಾದ ಬಹುಮತ ಮಾತ್ರ ಸಿಗಲಿಲ್ಲ. ಇದರಿಂದ `ಒನ್ ನೇಷನ್ ಒನ್ ಎಲೆಕ್ಷನ್' ವಿವಾದಿತ ವಿಧೇಯಕ ಆಗಿ ದೇಶದಲ್ಲಿ ಚರ್ಚೆ ಹುಟ್ಟುಹಾಕಿದೆ.
ದೇಶದ ಜನರ ತೆರಿಗೆ ಹಣವನ್ನು ರಾಜಕೀಯ ಪಕ್ಷಗಳು; ಜನನಾಯಕರು ಮನಸೋಯಿಚ್ಛೆ ಉಡಾಯಿಸುತ್ತಿದ್ದಾರೆ. ಯಾರಪ್ಪನ ದುಡ್ಡೆಂದು ಹೀಗೆ ಪೋಲು ಮಾಡುತ್ತಿದ್ದಾರೆ? ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆಯಂತಾಗಿಹೋಗಿದೆ ಪ್ರಸ್ತುತ ಚುನಾವಣಾ ವ್ಯವಸ್ಥೆ.
ಮಸೂದೆ ಮೂಲಕ ಕೇಂದ್ರ ಸರ್ಕಾರವು ಸಂವಿಧಾನಕ್ಕೆ ತಿದ್ದುಪಡಿ ಮಾಡಲು ಮುಂದಾಗಿದೆ. ಆದರೆ, ಸಂಖ್ಯಾಬಲದ ಕೊರತೆಯಿಂದ ತನ್ನ ಕನಸನ್ನು ಸಾಕಾರಗೊಳಿಸಲು ಸಾಧ್ಯವಾಗಿಲ್ಲ. ನಿರೀಕ್ಷೆಯಂತೆ ಲೋಕಸಭೆಯಲ್ಲಿ ಕಾಂಗ್ರೆಸ್, ಸಮಾಜವಾದಿ ಪಕ್ಷ, ತೃಣಮೂಲ ಕಾಂಗ್ರೆಸ್, ಡಿಎಂಕೆ, ಅಸಾದುದ್ದೀನ್ ಓವೈಸಿ ಎಐಎಂಐಎA ಸೇರಿದಂತೆ ಸಣ್ಣ ಪಕ್ಷಗಳು ಕೂಡ ಬಿಲ್‌ಗೆ ತೀವ್ರ ವಿರೋಧ ವ್ಯಕ್ತಪಡಿಸಿವೆ. ಬಿಜೆಪಿಯ ಇಬ್ಬರು ಮಿತ್ರಪಕ್ಷಗಳಾದ ಆಂಧ್ರದ ಆಡಳಿತಾರೂಢ ತೆಲುಗು ದೇಶಂ ಪಕ್ಷ ಹಾಗೂ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಬಣ ಮಾತ್ರ ಮಸೂದೆಗೆ ಬೆಂಬಲ ವ್ಯಕ್ತಪಡಿಸಿವೆ. ಒಟ್ಟಾರೆಯಾಗಿ `ಒಂದು ದೇಶ, ಒಂದು ಚುನಾವಣೆ' ಜಾರಿ ಹಿಂದೆ ನಂಬರ್ ಗೇಮ್ ಶುರುವಾಗಿದೆ.
ಸಾಧಾರಣವಾಗಿ ಚುನಾವಣೆಯ ವೆಚ್ಚವನ್ನು ಸಾಮಾನ್ಯವಾಗಿ ಸರ್ಕಾರವೇ ಭರಿಸುತ್ತದೆ. ದೇಶದ ಸಾರ್ವತ್ರಿಕ ಚುನಾವಣೆಗೆ ಖರ್ಚಾಗುವ ವೆಚ್ಚವನ್ನು ನೋಡಿದರೆ ನೀವೇ ದಂಗಾಗುತ್ತೀರಿ. ಆಗಷ್ಟೇ ಮೋದಿಯವರ ಪರಿಕಲ್ಪನೆಯ `ಒಂದು ದೇಶ ಒಂದು ಚುನಾವಣೆ’ ಎಷ್ಟು ಮುಖ್ಯವೆಂಬುದು ಅರ್ಥವಾಗುತ್ತದೆ. ಅಷ್ಟೇ ಅಲ್ಲ; ಜನಸಾಮಾನ್ಯರ ತೆರಿಗೆ ಹಣ ಉಳಿತಾಯವಾಗಿ; ಸದ್ವಿನಿಯೋಗಗೊಳ್ಳುತ್ತದೆಂಬುದನ್ನು ಅರಿಯಬಹುದಾಗಿದೆ.
ದೇಶದಲ್ಲಿ ನಡೆದ ಮೊದಲ ಚುನಾವಣೆಯಿಂದ ಇಲ್ಲಿಯವರೆಗೆ ಚುನಾವಣೆಗಳ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದೆ.
೧೯೫೧-೫೨ರಲ್ಲಿ ದೇಶದಲ್ಲಿ ಮೊದಲ ಲೋಕಸಭೆ ಚುನಾವಣೆ ನಡೆದಿತ್ತು. ಈ ಚುನಾವಣೆಯಲ್ಲಿ ೧೦.೫ ಕೋಟಿ ರೂ ಖರ್ಚಾಗಿತ್ತು. ಆದರೆ ೨೦೧೪ರ ಲೋಕಸಭೆ ಚುನಾವಣೆಯಲ್ಲಿ ಈ ವೆಚ್ಚ ೩೮೭೦.೩ ಕೋಟಿ ರೂಪಾಯಿಗಳಿಗೆ ತಲುಪಿತ್ತು.
ಅಂದರೆ, ೬೩ ವರ್ಷಗಳಲ್ಲಿ ಚುನಾವಣಾ ವೆಚ್ಚದಲ್ಲಿ ಶೇ.೩೬,೮೫೭ರಷ್ಟು ಹೆಚ್ಚಳ ದಾಖಲಾಗಿದೆ. ಇದೇ ವೇಳೆ ಮತದಾರರ ಸಂಖ್ಯೆ ೧೭.೩೨ ಕೋಟಿಯಿಂದ ೯೧.೨ ಕೋಟಿಗೆ ಏರಿಕೆಯಾಗಿತ್ತು. ಅಲ್ಲದೆ, ೨೦೦೯ ಮತ್ತು ೨೦೧೪ ರ ನಡುವೆ ಚುನಾವಣಾ ವೆಚ್ಚವು ಸುಮಾರು ೩ ಪಟ್ಟು ಹೆಚ್ಚಾಗಿದೆ. ೨೦೦೯ರ ಲೋಕಸಭೆ ಚುನಾವಣೆಯಲ್ಲಿ ೧೧೧೪.೪ ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಚುನಾವಣಾ ಆಯೋಗದ ಪ್ರಕಾರ, ಈ ಸಾರ್ವತ್ರಿಕ ಚುನಾವಣೆಯಲ್ಲಿ ೯೭ ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ೨೦೧೯ರ ಲೋಕಸಭೆ ಚುನಾವಣೆಯಲ್ಲಿ ಎಷ್ಟು ಖರ್ಚಾಗಿದೆ ಎಂಬ ಮಾಹಿತಿಯನ್ನು ಚುನಾವಣಾ ಆಯೋಗ ಬಹಿರಂಗಪಡಿಸಿಲ್ಲ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ೨೦೨೪ರ ಮಧ್ಯಂತರ ಬಜೆಟ್‌ನಲ್ಲಿ ಚುನಾವಣಾ ವೆಚ್ಚಕ್ಕಾಗಿ ೨,೪೪೨.೮೫ ಕೋಟಿ ರೂ ಘೋಷಿಸಿದ್ದಾರೆ. ಇದರಲ್ಲಿ ಲೋಕಸಭೆ ಚುನಾವಣೆ ನಡೆಸಲು ೧೦೦೦ ಕೋಟಿ ರೂ ಖರ್ಚು ಮಾಡಲಾಗುತ್ತದೆ. ಅಲ್ಲದೆ ಮತದಾರರ ಗುರುತಿನ ಚೀಟಿ ಹಂಚಿಕೆಗಾಗಿ ೪೦೪.೮೧ ಕೋಟಿ ಮೀಸಲಿಡಲಾಗಿದೆ. ಅಲ್ಲದೆ ಇವಿಎಂಗೆ ಬಜೆಟ್‌ನಲ್ಲಿ ೩೪.೮೪ ಕೋಟಿ ರೂ ನಿಗದಿಪಡಿಸಲಾಗಿದೆ. ಒಟ್ಟಾರೆ ಒಟ್ಟಾರೆ ೨೦೨೪ರ ಲೋಕಸಭಾ ಚುನಾವಣೆಗೆ ೨೦೪೦ ಕೋಟಿ ರೂ ಮೀಸಲಿಡಲಾಗಿದೆ.
ಯಾರಪ್ಪನ ದುಡ್ಡು?
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣಾ ಹಬ್ಬದ ಸಂಭ್ರಮಾಚರಣೆ ತುಟ್ಟಿಯಾಗುತ್ತಿದ್ದು ಕೇಂದ್ರ ಸರಕಾರದ ಅಧಿಕೃತ ವೆಚ್ಚದ ಹೊರತು ೨೦೨೪ರ ಲೋಕಸಭಾ ಚುನಾವಣೆಯಲ್ಲಿ ಚುನಾವಣಾ ಪರಿಣಿತರ ಲೆಕ್ಕಾಚಾರದಂತೆ ೭೦,೦೦೦ ಕೋಟಿ ರೂ. ಗಳಿಗೂ ಅಧಿಕ ಅನಧಿಕೃತ ಖರ್ಚಿನ ಅಂದಾಜಿದೆ.
ಲೋಕಸಭಾ ಚುನಾವಣಾ ವೆಚ್ಚವನ್ನು ಕೇಂದ್ರ ಸರಕಾರ ಹಾಗೂ ವಿಧಾನಸಭಾ ಚುನಾವಣೆ ವೆಚ್ಚವನ್ನು ಆಯಾ ರಾಜ್ಯ ಸರಕಾರಗಳು ಭರಿಸುತ್ತವೆ. ಲೋಕಸಭೆ, ವಿಧಾನಸಭೆ ಚುನಾವಣೆ ಜತೆಯಾದರೆ ಕೇಂದ್ರ/ರಾಜ್ಯ ತಲಾ ಶೇ. ೫೦ ಪಾಲು ನೀಡುತ್ತವೆ. ರಾಜಕೀಯ ಪಕ್ಷಗಳು, ಅಭ್ಯರ್ಥಿಗಳ ಅನಧಿಕೃತ ಖರ್ಚು ೧೦ ಪಟ್ಟಿದರೂ ಲೆಕ್ಕಕ್ಕೆ ಸಿಗೋದಿಲ್ಲ.
ಲೋಕಸಭಾ ಕ್ಷೇತ್ರದಲ್ಲಿ ಕಣಕ್ಕಿಳಿದ ಪ್ರತಿಯೊಬ್ಬ ಅಭ್ಯರ್ಥಿಯೂ ೨೦೨೪ರ ಲೋಕಸಭೆ ಚುನಾವಣೆಗೆ ಸಣ್ಣ ರಾಜ್ಯದಲ್ಲಿ ಗರಿಷ್ಠ ೭೫ ಲಕ್ಷ ರೂ., ದೊಡ್ಡ ರಾಜ್ಯದಲ್ಲಿ ಗರಿಷ್ಠ ೯೫ ಲಕ್ಷ ರೂ. ಖರ್ಚು ಮಾಡಬಹುದು. ರಾಜಕೀಯ ಪಕ್ಷಗಳು ಎಷ್ಟು ಬೇಕಿದ್ದರೂ ಖರ್ಚು ಮಾಡಬಹುದು. ಅಭ್ಯರ್ಥಿಗಳಿಗಿರುವ ಖರ್ಚಿನ ಮಿತಿ ಪಕ್ಷಗಳಿಗಿಲ್ಲ.
೨೦೧೯ರಲ್ಲಿ ಚುನಾವಣೆಗಾಗಿ ಬಿಜೆಪಿ ಅಂದಾಜು ೧,೨೬೪,೩೩ ಕೋಟಿ ರೂ.ವ್ಯಯಿಸಿದರೆ, ಕಾಂಗ್ರೆಸ್ ಅಂದಾಜು ೮೨೦.೮೯ ಕೋಟಿ ವ್ಯಯಿಸಿದೆ. ದೇಶದಲ್ಲಿ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದರೆ; ಆ ಐದು ವರ್ಷದಲ್ಲಿ ಒಂದೊAದು ರಾಜ್ಯಗಳಲ್ಲೂ ಒಂದೊಂದು ಅವಧಿಯಲ್ಲಿ ಚುನಾವಣೆಗಳು ನಡೆಯುತ್ತವೆ. ಮತದಾರರ ಮೇಲೆ ಸುಳ್ಳು ಭರವಸೆಗಳ ಆಮೀಷವೊಡ್ಡಿ ಚುನಾವಣೆ ನಡೆಸಿ ಅಧಿಕಾರದ ಕಸರತ್ತು ನಡೆಸುತ್ತವೆ. ಸಾಲದಕ್ಕೆ ರಾಜಕೀಯ ಪಲ್ಲಟಗಳಿಂದ ಎದುರಾಗುವ ಉಪಚುನಾವಣೆಗಳಿಂದಲೂ ದೇಶದ, ರಾಜ್ಯದ ಬೊಕ್ಕಸಕ್ಕೆ ಗುರುತರವಾದ ಪೆಟ್ಟು ಬೀಳುತ್ತಿವೆ. ಇವೆಲ್ಲಕ್ಕೂ ರಾಮಬಾಣವೆಂದರೇ ಒಂದು ದೇಶ ಒಂದು ಚುನಾವಣೆ ಮಾತ್ರವೇ!
ಚುನಾವಣಾ ವೆಚ್ಚ ಹೆಚ್ಚಳಕ್ಕೆ ಕಾರಣಗಳು:
ಲೋಕಸಭೆ ಚುನಾವಣೆ ವೆಚ್ಚ ಹೆಚ್ಚಳಕ್ಕೆ ಹಲವು ಕಾರಣಗಳಿವೆ. ಸ್ಥಾನಗಳ ಸಂಖ್ಯೆ ಹೆಚ್ಚಳ, ಮತಗಟ್ಟೆಗಳು, ಭದ್ರತೆಯ ಅಗತ್ಯತೆ, ಮತದಾರರು ಮತ್ತು ಅಭ್ಯರ್ಥಿಗಳ ಸಂಖ್ಯೆ ಹೆಚ್ಚಳವು ಚುನಾವಣಾ ವೆಚ್ಚವನ್ನು ಹೆಚ್ಚಿಸುತ್ತದೆ. ೧೯೫೧-೫೨ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ೪೦೧ ಸ್ಥಾನಗಳಲ್ಲಿ ೫೩ ಪಕ್ಷಗಳ ೧,೮೭೪ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ೨೦೧೯ರ ಲೋಕಸಭೆ ಚುನಾವಣೆಯಲ್ಲಿ ಈ ಸಂಖ್ಯೆಯಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ೬೭೩ ಪಕ್ಷಗಳ ೮,೦೫೪ ಅಭ್ಯರ್ಥಿಗಳು ೫೪೩ ಸ್ಥಾನಗಳಲ್ಲಿ ಸ್ಪರ್ಧಿಸಿದ್ದು, ಒಟ್ಟು ೧೦.೩೭ ಲಕ್ಷ ಮತಗಟ್ಟೆಗಳಲ್ಲಿ ಮತದಾನ ನಡೆದಿತ್ತು. `ಒಂದು ದೇಶ ಒಂದು ಚುನಾವಣೆಯಿಂದ’ ದೇಶಕ್ಕೆ ಒಳಿತೇ ಹೊರತು ಸ್ವಾರ್ಥಕ್ಕಲ್ಲ.
ಏನಿದು ಒಎನ್‌ಒಪಿ ಮಸೂದೆ?
ಒಂದು ದೇಶ ಒಂದು ಚುನಾವಣೆ; ಸಂವಿಧಾನದ ೧೨೯ನೇ ತಿದ್ದುಪಡಿ ಮಸೂದೆಯು ಸಂವಿಧಾನದಲ್ಲಿ ಹೊಸ ವಿಧಿ ೮೨ಎ ಅನ್ನು ಸೇರಿಸಲು ಪ್ರಸ್ತಾಪಿಸುತ್ತದೆ. ಇದು, ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸಲು ಅವಕಾಶ ಕಲ್ಪಿಸುತ್ತದೆ. ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆ ಅಧಿಕಾರಾವಧಿಯನ್ನು ನಿರ್ಧರಿಸಲು ಕಲಂ ೮೩ ಮತ್ತು ೧೭೨ ನೇ ವಿಧಿಗಳನ್ನು ತಿದ್ದುಪಡಿ ಮಾಡಲು ಅವಕಾಶ ನೀಡುತ್ತದೆ.
ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳು (ತಿದ್ದುಪಡಿ) ವಿಧೇಯಕವು, ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಗಳ ಚುನಾವಣೆಯ ಜೊತೆಗೆ ದೆಹಲಿ ಮತ್ತು ಜಮ್ಮು- ಕಾಶ್ಮೀರದ ವಿಧಾನಸಭೆಗೂ ಚುನಾವಣೆ ನಡೆಸಲು ಕೇಂದ್ರಾಡಳಿತ ಪ್ರದೇಶಗಳ ಕಾಯ್ದೆ ೧೯೬೩ರ ಸೆಕ್ಷನ್ ೫, ರಾಷ್ಟ್ರೀಯ ರಾಜಧಾನಿ ದೆಹಲಿ ಸರ್ಕಾರದ ಕಾಯ್ದೆ ೧೯೯೧ರ ಸೆಕ್ಷನ್ ೫ ಮತ್ತು ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಕಾಯ್ದೆ ೨೦೧೯ರ ಸೆಕ್ಷನ್ ೧೭ಕ್ಕೆ ತಿದ್ದುಪಡಿ ಮಾಡಲು ಪ್ರಸ್ತಾಪಿಸುತ್ತದೆ.
ವಿಧೇಯಕಗಳ ಅಂಗೀಕಾರದ ನಂತರ ಏನಾಗುತ್ತದೆ?
ವಿಧೇಯಕಗಳು ಅಂಗೀಕಾರದ ಬಳಿಕ, ಹೊಸ ವಿಧಿಯ (೮೨ಎ) ನಿಯಮಗಳು ಜಾರಿಗೆ ಬರುತ್ತವೆ. ಇದರ ಪ್ರಕಾರ, ಸಾರ್ವತ್ರಿಕ ಚುನಾವಣೆ ನಡೆದು ಲೋಕಸಭೆಯ ಮೊದಲ ಅಧಿವೇಶನದಲ್ಲಿ ದೇಶದ ರಾಷ್ಟ್ರಪತಿ ಒಂದು ಅಧಿಸೂಚನೆಯನ್ನು ಹೊರಡಿಸುತ್ತಾರೆ. ಅದರಲ್ಲಿ ಸಂಸತ್ ಅನ್ನು ಚುನಾಯಿಸಿದ ದಿನಾಂಕವನ್ನು ಘೋಷಿಸಲಾಗುತ್ತದೆ.
ಅಂದರೆ, ರಾಷ್ಟ್ರಪತಿಗಳು ನಿಗದಿ ಮಾಡಿದ ದಿನಾಂಕದಿಂದ ಹಿಡಿದು ಮುಂದಿನ ಐದು ವರ್ಷ ಸಂಸತ್ತಿನ ಅಧಿಕಾರದ ಅವಧಿಯಾಗಿರುತ್ತದೆ. ಇದರ ಜೊತೆಗೆ ರಾಜ್ಯಗಳ ವಿಧಾನಸಭೆಗಳ ಅಧಿಕಾರಾವಧಿಯು ಸಂಸತ್ ಅವಧಿಯ ದಿನಾಂಕದಂದೇ ಮುಗಿಯಲಿದೆ. ಬಳಿಕ ಲೋಕಸಭೆ ಮತ್ತು ಎಲ್ಲಾ ವಿಧಾನಸಭೆಗಳಿಗೆ ಒಮ್ಮೆಲೇ ಸಾರ್ವತ್ರಿಕ ಚುನಾವಣೆಗಳು ಜರುಗಲಿವೆ.
ಉದಾಹರಣೆಗೆ, ಪ್ರಸ್ತುತ ಲೋಕಸಭೆಯ ಮೊದಲ ಅಧಿವೇಶನದ ದಿನಾಂಕ ಜೂನ್ ೨೪ ಆದಲ್ಲಿ, ಲೋಕಸಭೆ ಮತ್ತು ಎಲ್ಲಾ ವಿಧಾನಸಭೆಗಳಿಗೆ ಮೊದಲ ಏಕಕಾಲಿಕ ಚುನಾವಣೆಯು ಜೂನ್ ೨೦೨೯ ರಲ್ಲಿ ನಡೆಯಬೇಕು. ಹೀಗಾಗಿ, ಜೂನ್ ೨೦೨೪ ರ ನಂತರ ಮತ್ತು ಜೂನ್ ೨೦೨೯ ಕ್ಕೂ ಮೊದಲು ಯಾವುದೇ ರಾಜ್ಯ ವಿಧಾನಸಭೆಗಳ ಅಧಿಕಾರಾವಧಿ ಮುಗಿದಲ್ಲಿ, ಅವನ್ನು ೨೦೨೯ ರ ಸಾರ್ವತ್ರಿಕ ಚುನಾವಣೆವರೆಗೂ ವಿಸ್ತರಿಸಲು ಅವಕಾಶ ನೀಡುತ್ತದೆ.
ಲೋಕಸಭೆ ಅಥವಾ ವಿಧಾನಸಭೆ ವಿಸರ್ಜನೆಯಾದರೆ?
ಲೋಕಸಭೆ ಅಥವಾ ವಿಧಾನಸಭೆಗಳ ಪೂರ್ಣಾವಧಿಗಿಂತ ಮುಂಚೆಯೇ ಸರ್ಕಾರ ವಿಸರ್ಜನೆಯಾದರೆ, ಈಗಿರುವಂತೆ ಮಧ್ಯಂತರ ಚುನಾವಣೆ ನಡೆಯತ್ತವೆ. ಆದರೆ, ಈ ಹಿಂದಿನAತೆ ಚುನಾವಣೆ ನಡೆದು ಹೊಸ ಸರ್ಕಾರ ರಚನೆಯಾದ ದಿನಾಂಕದಿಂದ ಐದು ವರ್ಷಗಳು ಇರುವುದಿಲ್ಲ. ಬದಲಾಗಿ, ಲೋಕಸಭೆ ಅಥವಾ ರಾಜ್ಯಗಳ ವಿಧಾನಸಭೆಯ ಸಾರ್ವತ್ರಿಕ ಚುನಾವಣೆ ನಡೆದ ದಿನಾಂಕಕ್ಕೆ ಸಮಾನವಾಗಿ ಅಂದಿಗೆ ಅಧಿಕಾರಾವಧಿ ಮುಗಿಯುತ್ತದೆ.
ಉದಾಹರಣೆಗೆ, ೨೦೨೯ ರ ಸಾರ್ವತ್ರಿಕ ಚುನಾವಣೆಯ ನಂತರ ಲೋಕಸಭೆ ಅಥವಾ ಯಾವುದೇ ರಾಜ್ಯ ವಿಧಾನಸಭೆಗಳು ವಿಸರ್ಜನೆಯಾದರೆ, ಮಧ್ಯಂತರ ಚುನಾವಣೆಯನ್ನು ನಡೆಸಲಾಗುತ್ತದೆ. ಮಧ್ಯಂತರ ಚುನಾವಣೆಯ ಮೂಲಕ ರಚಿತವಾದ ಹೊಸ ಸರ್ಕಾರದ ಅಧಿಕಾರಾವಧಿಯು ಜೂನ್ ೨೦೩೪ ಕ್ಕೆ ಮುಗಿಯುತ್ತದೆ. ಅಂದರೆ, ಮಧ್ಯಂತರ ಚುನಾವಣೆಯ ಅವಧಿಯು ಆಗ ಐದು ವರ್ಷ ಆಗಿರುವುದಿಲ್ಲ.
ವಿಧಾನಸಭೆಗಳ ಚುನಾವಣೆ ಮುಂದೂಡಬಹುದೇ?
ಲೋಕಸಭೆಯ ಜೊತೆಗೆ ವಿಧಾನಸಭೆಯ ಚುನಾವಣೆ ನಡೆದು, ಆ ವಿಧಾನಸಭೆಯು ಪೂರ್ಣಾವಧಿ ಮುಗಿಸದೆ ವಿಸರ್ಜನೆಯಾದಲ್ಲಿ ಅದಕ್ಕೆ ಮಧ್ಯಂತರ ಚುನಾವಣೆ ನಡೆಯಲಿದೆ. ಹಾಗೊಂದು ವೇಳೆ ಚುನಾವಣೆ ನಡೆಸಲು ಸಾಧ್ಯವಾಗದ ಪರಿಸ್ಥಿತಿ ಇದ್ದಲ್ಲಿ, ಅದನ್ನು ಕೇಂದ್ರ ಚುನಾವಣಾ ಆಯೋಗವು ನಿರ್ದಿಷ್ಟ ಅವಧಿಗೆ ಚುನಾವಣೆ ಮುಂದೂಡಬಹುದು. ಈ ಅವಧಿಯಲ್ಲಿ ರಾಷ್ಟ್ರಪತಿ ಆಡಳಿತ ಆ ರಾಜ್ಯದಲ್ಲಿ ಜಾರಿಯಲ್ಲಿರುತ್ತದೆ.