ಜನ್ಮತಃ ಪೌರತ್ವ ಕಾಯ್ದೆ ರದ್ದತಿಗೆ ಅಮೆರಿಕದಲ್ಲೇ ಆಕ್ರೋಶ – 18,000 ಭಾರತೀಯರು ಗಡಿಪಾರಾಗ್ತಾರಾ?
ಹೋಮ್ ಪೇಜ್ವಿಶ್ವ


ವಾಷಿಂಗ್ಟನ್: ಅಮೆರಿಕ ಅಧ್ಯಕ್ಷರಾದ ತಕ್ಷಣ ಟ್ರಂಪ್ ತೆಗೆದುಕೊಂಡ ನಿರ್ಣಯಗಳು ನಿರೀಕ್ಷೆಯಂತೆ ವಿವಾದ ಹುಟ್ಟು ಹಾಕಿವೆ. ಜನ್ಮತಃ ಪೌರತ್ವ ಕಾಯ್ದೆ ರದ್ದು ಮಾಡಿದ ಟ್ರಂಪ್ ವಿರುದ್ಧ ಅಮೆರಿಕದಲ್ಲೇ ಭಾರೀ ಆಕ್ರೋಶ ವ್ಯಕ್ತವಾಗಿದೆ..
ಡೆಮಾಕ್ರೆಟಿಕ್ ಆಡಳಿತ ಇರುವ 22 ರಾಜ್ಯಗಳು ಕಾನೂನು ಸಮರಕ್ಕೆ ಮುಂದಾಗಿವೆ. ಅಧ್ಯಕ್ಷ ಟ್ರಂಪ್ ನಿರ್ಣಯ ಸಂವಿಧಾನ ವಿರೋಧಿ ಎನ್ನುತ್ತಾ ಪ್ರತ್ಯೇಕವಾಗಿ ಕೋರ್ಟ್ ಮೆಟ್ಟಿಲೇರಿವೆ. ಟ್ರಂಪ್ ಆದೇಶ ಜಾರಿಯಾಗುವ ಮುನ್ನವೇ ತಡೆಯಬೇಕು ಎಂದು ಕ್ಯಾಲಿಫೋರ್ನಿಯಾ ಅಟಾರ್ನಿ ಜನರಲ್ ಕೋರ್ಟನ್ನು ಕೋರಿದ್ದಾರೆ. ಸರಿಯಾದ ದಾಖಲೆ ಪತ್ರಗಳು ಇಲ್ಲದೇ ಅಮೆರಿಕದಲ್ಲಿ 1.40 ಕೋಟಿ ಮಂದಿ ನೆಲೆಸಿದ್ದು, ಇದರಲ್ಲಿ ಭಾರತೀಯರ ಸಂಖ್ಯೆ 7.25 ಲಕ್ಷ ಇದೆ. ಈ ಪೈಕಿ 18,000 ಭಾರತೀಯರನ್ನು ಗಡಿಪಾರು ಮಾಡಲು ಅಮೆರಿಕ ಸಿದ್ಧತೆ ನಡೆಸಿದೆ ಎನ್ನಲಾಗಿದೆ.
ಈ ಮಧ್ಯೆ, ಮೆಕ್ಸಿಕೋ ಕೆನಡಾ ಬೆನ್ನಲ್ಲೇ ಚೀನಾದಿಂದ ಆಮದಾಗುವ ಉತ್ಪನ್ನಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸಲು ಟ್ರಂಪ್ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಫೆಬ್ರವರಿ 1ರಿಂದ ಚೀನಾ ಉತ್ಪನ್ನಗಳ ಮೇಲೆ ಶೇಕಡಾ 10ರಷ್ಟು ಸುಂಕ ವಿಧಿಸುವ ಸಾಧ್ಯತೆ ಇದೆ. ಇದು ಚೀನಾ ಆತಂಕಕ್ಕೆ ಕಾರಣವಾಗಿದೆ. ಪುಟಿನ್ ಚರ್ಚೆಗೆ ಬಂದಿಲ್ಲ ಅಂದರೆ ರಷ್ಯಾ ಮೇಲೆ ದಿಗ್ಬಂಧನ ವಿಧಿಸುವ ಎಚ್ಚರಿಕೆಯನ್ನು ಟ್ರಂಪ್ ನೀಡಿದ್ದಾರೆ.
ಸಿಲ್ಕ್ರೋಡ್ ಡಾರ್ಕ್ವೆಬ್ ವ್ಯವಸ್ಥಾಪಕ ರಾಸ್ ವಿಲಿಯಂಗೆ ಟ್ರಂಪ್ ಕ್ಷಮಾದಾನ ನೀಡಿದ್ದಾರೆ. ಈ ಮಧ್ಯೆ ಫೆಡರಲ್ ಡೈವರ್ಸಿಟಿ, ಈಕ್ವಿಟಿ, ಇನ್ಕ್ಲೂಷನ್ ಇಲಾಖೆ ಸಿಬ್ಬಂದಿಯನ್ನು ಕಿತ್ತೊಗೆಯಲು ಟ್ರಂಪ್ ಮುಂದಾಗಿದ್ದಾರೆ. ಇದರ ಭಾಗವಾಗಿ ವೇತನ ಸಹಿತವಾಗಿ ರಜೆ ಮೇಲೆ ತೆರಳುವಂತೆ ಸಿಬ್ಬಂದಿಗೆ ಸೂಚಿಸಿ ಟ್ರಂಪ್ ಆದೇಶ ಹೊರಡಿಸಿದ್ದಾರೆ.