ಸಿಕ್ಸರ್ ಗಳ ಸುರಿಮಳೆ… ಟಿ20 ಕ್ರಿಕೆಟ್ ನಲ್ಲಿ ಕೀರನ್ ಪೊಲಾರ್ಡ್ ವಿಶ್ವ ದಾಖಲೆ

ಕ್ರಿಕೆಟ್

1/18/20251 ನಿಮಿಷ ಓದಿ

ಇಂಟರ್ನ್ಯಾಷನಲ್ ಲೀಗ್ ಟಿ20 ಟೂರ್ನಿಯ 7ನೇ ಪಂದ್ಯದ ಮೂಲಕ ಕೀರನ್ ಪೊಲಾರ್ಡ್ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಡೆಸರ್ಟ್ ವೈಪರ್ಸ್ ವಿರುದ್ಧದ ಪಂದ್ಯದಲ್ಲಿ ಎಂಐ ಎಮಿರೇಟ್ಸ್ ಪರ ಕಣಕ್ಕಿಳಿದ ಪೊಲಾರ್ಡ್ 23 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 2 ಫೋರ್ಗಳೊಂದಿಗೆ 36 ರನ್ ಬಾರಿಸಿದ್ದರು.

ಈ ಮೂರು ಸಿಕ್ಸ್ ಗಳೊಂದಿಗೆ ಕೀರನ್ ಪೊಲಾರ್ಡ್ ಟಿ20 ಕ್ರಿಕೆಟ್ ನಲ್ಲಿ 900+ ಸಿಕ್ಸ್ ಗಳನ್ನು ಪೂರೈಸಿದ್ದಾರೆ. ಅಲ್ಲದೆ ಈ ಸಾಧನೆ ಮಾಡಿದ ವಿಶ್ವದ 2ನೇ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ಸಹ ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ಸಾಧನೆ ಮಾಡಿದ್ದು ವೆಸ್ಟ್ ಇಂಡೀಸ್ನ ಕ್ರಿಸ್ ಗೇಲ್.

ಯುನಿವರ್ಸ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ ಟಿ20 ಕ್ರಿಕೆಟ್ ನಲ್ಲಿ 463 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 455 ಇನ್ನಿಂಗ್ಸ್ ಗಳಲ್ಲಿ ಬ್ಯಾಟ್ ಬೀಸಿರುವ ಅವರು 10060 ಎಸೆತಗಳಲ್ಲಿ 1056 ಸಿಕ್ಸ್ ಸಿಡಿಸಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಸಾವಿರಕ್ಕೂ ಹೆಚ್ಚು ಸಿಕ್ಸ್ ಸಿಡಿಸಿದ ವಿಶ್ವದ ಏಕೈಕ ಬ್ಯಾಟರ್ ಎನಿಸಿಕೊಂಡಿದ್ದಾರೆ.

ವೆಸ್ಟ್ ಇಂಡೀಸ್ ದಾಂಡಿಗನೇ ಆಗಿರುವ ಕೀರನ್ ಪೊಲಾರ್ಡ್ ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಟಿ20 ಕ್ರಿಕೆಟ್ ನಲ್ಲಿ 690 ಪಂದ್ಯಗಳನ್ನಾಡಿರುವ ಪೊಲಾರ್ಡ್ 614 ಇನಿಂಗ್ಸ್ಗಳಲ್ಲಿ 8930 ಎಸೆತಗಳನ್ನು ಎದುರಿಸಿದ್ದು, ಈ ವೇಳೆ ಒಟ್ಟು 901 ಸಿಕ್ಸ್ ಬಾರಿಸಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ ನಲ್ಲಿ 900+ ಸಿಕ್ಸ್ ಸಿಡಿಸಿದ ವಿಶ್ವದ 2ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಇನ್ನು ಟಿ20 ಕ್ರಿಕೆಟ್ ನಲ್ಲಿ ಅತ್ಯಧಿಕ ಸಿಕ್ಸ್ ಸಿಡಿಸಿದ ಭಾರತೀಯನ ದಾಖಲೆ ರೋಹಿತ್ ಶರ್ಮಾ ಹೆಸರಿನಲ್ಲಿದೆ. ಈವರೆಗೆ 448 ಟಿ20 ಪಂದ್ಯಗಳನ್ನಾಡಿರುವ ಹಿಟ್ ಮ್ಯಾನ್ 435 ಇನ್ನಿಂಗ್ಸ್ ಗಳಲ್ಲಿ ಬ್ಯಾಟ್ ಬೀಸಿದ್ದಾರೆ. ಈ ವೇಳೆ 8778 ಎಸೆತಗಳಲ್ಲಿ 525 ಸಿಕ್ಸ್ ಬಾರಿಸಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ ನಲ್ಲಿ 500+ ಸಿಕ್ಸ್ ಸಿಡಿಸಿದ ಏಕೈಕ ಭಾರತೀಯ ಬ್ಯಾಟರ್ ಎನಿಸಿಕೊಂಡಿದ್ದಾರೆ.