ಶ್ರೀರಾಮುಲುಗೆ ರಮೇಶ್ ಜಾರಕಿಹೊಳಿ ಕರೆ! ಬಿಜೆಪಿ ರೆಬಲ್ಸ್ ಟೀಂ ಸೇರ್ತಾರಾ ಮಾಜಿ ಸಚಿವ?
ಹೋಮ್ ಪೇಜ್ರಾಜ್ಯ


ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿನ ಭಿನ್ನಮತ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಈಗಾಗಲೆ ವಿಜಯೇಂದ್ರ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಟೀಂನಿಂದಾಗಿ ಪಕ್ಷದಲ್ಲಿ ಒಗ್ಗಟ್ಟು ಇಲ್ಲಾ ಎಂಬುದು ಸಾರ್ವಜನಿಕವಾಗಿದೆ. ಈ ನಡುವೆ ಆಪ್ತ ಸ್ನೇಹಿತ ಜನಾರ್ದನ ರೆಡ್ಡಿ ವಿರುದ್ಧ ಮಾಜಿ ಸಚಿವ ಶ್ರೀರಾಮುಲು ಸಿಡಿದೆದ್ದಿದ್ದು, ಬಿಜೆಪಿಗೆ ಮತ್ತಷ್ಟು ಸಂಕಷ್ಟ ತರಿಸಿದೆ. ಈ ನಡುವೆ ಶ್ರೀರಾಮುಲು ಅವರನ್ನು ಬಿಜೆಪಿ ರೆಬಲ್ಸ್ ಟೀಂ ತಮ್ಮತ್ತ ಸೆಳೆಯುವ ಯತ್ನ ನಡೆಸುತ್ತಿದೆ ಎನ್ನಲಾಗಿದೆ.
ವಿಜಯೇಂದ್ರ ಮತ್ತು ಯತ್ನಾಳ್ ಸಮರ ಬೆನ್ನೆಲ್ಲೆ ಜನಾರ್ದನ ರೆಡ್ಡಿ ಮತ್ತು ಶ್ರಿರಾಮುಲು ನಡುವಿನ ಕಾಳಗ ಬಿಜೆಪಿ ನಾಯಕರಿಗೆ ತಲೆನೋವು ಸೃಷ್ಟಿಸಿದೆ. ಇತ್ತ ಇದೇ ಸರಿಯಾದ ಸಮಯ ಎಂದು ಭಾವಿಸಿರುವ ರೆಬಲ್ಸ್ಗಳು ಅಸಮಾಧಾನಗೊಂಡ ರಾಮುಲು ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಕಸರತ್ತು ನಡೆಸಿದ್ದಾರೆ ಎನ್ನಲಾಗಿದೆ
ಶ್ರೀರಾಮುಲುಗೆ ಗಾಳ ಹಾಕುತ್ತಿರೋದು ಏಕೆ?
ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ದಾಸ್ ಶ್ರೀರಾಮುಲು ಅವರನ್ನು ಪ್ರಶ್ನೆ ಮಾಡುವ ಸಮಯದಲ್ಲಿ ರಾಜ್ಯಾಧ್ಯಕ್ಷ ವಿಜಯೇಂದ್ರ ನನ್ನ ರಕ್ಷಣೆಗೆ ಬರಲಿಲ್ಲ ಎಂದು ಶ್ರೀರಾಮುಲು ಅಸಮಾಧಾನಗೊಂಡಿದ್ದಾರೆ. ಈಗಾಗಲೆ ವಿಜಯೇಂದ್ರ ವಿರುದ್ಧ ಸಕ್ರಿಯವಾಗಿರುವ ಯತ್ನಾಳ್ ಮತ್ತು ತಂಡ ಶ್ರೀರಾಮುಲು ಅವರನ್ನು ತಮ್ಮತ್ತ ಸೆಳೆದರೆ ವಿಜಯೇಂದ್ರ ವಿರುದ್ಧದ ತಂಡಕ್ಕೆ ಮತ್ತಷ್ಟು ಶಕ್ತಿ ಬರಬಹುದು ಎಂಬ ಲೆಕ್ಕಾಚಾರದಲ್ಲಿ ಶ್ರೀರಾಮುಲುಗೆ ಗಾಳ ಹಾಕಿದೆ ಎಂದು ಹೇಳಲಾಗುತ್ತಿದೆ.
ರಾಮುಲುಗೆ ರಮೇಶ್ ಜಾರಕಿಹೊಳಿ ಫೋನ್?
ಅಸಮಾಧಾನಗೊಂಡಿರುವ ಶ್ರೀರಾಮುಲುಗೆ ರಮೇಶ್ ಜಾರಕಿಹೊಳಿ ಫೋನ್ ಮಾಡಿ ಭೇಟಿಗೆ ಅವಕಾಶ ಕೇಳಿದ್ದಾರೆ ಎನ್ನಲಾಗಿದೆ. ಇತ್ತ ರಾಮುಲು ಕೂಡ ನಾಳೆ ಸಿಗೋದಾಗಿ ರಮೇಶ್ ಜಾರಕಿಹೊಳಿಗೆ ತಿಳಿಸಿದ್ದು, ನಾಳೆ ರಾಮುಲು ಅವರನ್ನು ಭೇಟಿಯಾಗಿ ರೆಬಲ್ ನಾಯಕರು ಚರ್ಚೆ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದಲ್ಲದೆ ನಾಳೆಯೇ ಬೆಂಗಳೂರಿನಲ್ಲಿ ಬಿಜೆಪಿ ರೆಬೆಲ್ಗಳಿಂದ ಮಹತ್ವದ ಸಭೆ ನಡೆಯಲಿದ್ದು, ಅಸಮಾಧಾನಗೊಂಡ ರಾಮುಲು ಅವರನ್ನು ಸಮಧಾನ ಪಡಿಸಲಿದ್ದಾರೆ ಎನ್ನಲಾಗಿದೆ.
ನಾಳೆ ರಾಮುಲು ಜೊತೆ ರೆಬಲ್ಸ್ ಚರ್ಚೆ
ತಮ್ಮ ಟೀಂಗೆ ಶ್ರೀರಾಮುಲು ಅವರನ್ನು ಸೇರಿಸಿಕೊಳ್ಳುವ ಬಗ್ಗೆ ರೆಬಲ್ ನಾಯಕರು ಚರ್ಚೆ ನಡೆಸಲಿದ್ದಾರೆ. ಪಕ್ಷದಲ್ಲಿ ಜನಾರ್ದನ್ ರೆಡ್ಡಿಗೆ ಕೊಟ್ಟ ಅವಕಾಶದಿಂದ ಶ್ರೀರಾಮುಲು ಬೇಸಗೊಂಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಕೂಡ ಆಕ್ರೋಶ ಗೊಂಡಿರುವ ಶ್ರೀರಾಮುಲು, ಹೈಕಮಾಂಡ್ ಹಾಗೂ ರಾಜ್ಯ ಮಟ್ಟದಲ್ಲಿ ಪಕ್ಷದಲ್ಲಿ ರೆಡ್ಡಿ ಪ್ರಾಬಲ್ಯಕ್ಕೆ ಗರಂ ಆಗಿದ್ದಾರೆ. ಇದೀಗ ರಾಮುಲುರನ್ನು ತಮ್ಮತ್ತ ಸೆಳೆದು ವಿಜಯೇಂದ್ರ ನಾಯಕತ್ವವನ್ನು ಮತ್ತಷ್ಟು ವೀಕ್ ಮಾಡಲು ರೆಬೆಲ್ಗಳು ತಂತ್ರಗಾರಿಕೆ ಮಾಡಿದ್ದಾರೆ ಎನ್ನಲಾಗಿದೆ.