ಕಾಂಗ್ರೆಸ್ ಪಕ್ಷಕ್ಕೆ ಶ್ರೀರಾಮುಲು ಸೇರ್ಪಡೆ ವಿಚಾರ; ರೆಡ್ಡಿ ಮಾತಿನ ರಹಸ್ಯ ಬಿಚ್ಚಿಟ್ಟ ಕಾಂಗ್ರೆಸ್ ಸಚಿವರು!
ಬಳ್ಳಾರಿಹೋಮ್ ಪೇಜ್ರಾಜ್ಯ


ಬೆಂಗಳೂರು: ಬಳ್ಳಾರಿ ಗೆಳೆಯರಾದ ಮಾಜಿ ಸಚಿವ ಶ್ರೀರಾಮುಲು ಮತ್ತು ಜನಾರ್ದನ ರೆಡ್ಡಿ ನಡುವಿನ ಫೈಟ್ ಬೇರೊಂದು ಆಯಾಮ ಪಡೆದುಕೊಳ್ಳುತ್ತಿದೆ. ಶ್ರೀರಾಮುಲು ಅವರು ಕಾಂಗ್ರೆಸ್ ಪಕ್ಷಕ್ಕೆ ತೆರಳುವ ಮನಸ್ಸು ಮಾಡಿದ್ದಾರೆ, ಇದೇ ಕಾರಣಕ್ಕೇ ಹೋಗುವ ಮೊದಲು ನನ್ನ ಮೇಲೆ ಇಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಗುರುವಾರ ಜನಾರ್ಧನ ರೆಡ್ಡಿ ಆರೋಪಿಸಿದ್ದರು. ಇದಕ್ಕೆ ತಿರುಗೇಟು ಕೊಟ್ಟಿದ್ದ ಶ್ರೀರಾಮುಲು ಪಕ್ಷ ನನಗೆ ತಾಯಿ ಇದ್ದಂತೆ, ತಾಇಗೆ ದ್ರೋಹ ಮಾಡಲ್ಲ, ಪಕ್ಷ ಬಿಡುವ ಯೋಚನೆಯೇ ಇಲ್ಲ ಎಂದಿದ್ದರು. ಆದ್ರೆ, ಜನಾರ್ದನ ರೆಡ್ಡಿ ಆ ರೀತಿ ಹೇಳಿಕೆ ಕೊಡಲು ಬೇರೆ ಕಾರಣವಿದೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.
ಡಿಕೆ ಶಿವಕುಮಾರ್ ಅವರು ಸತೀಶ್ ಜಾರಕಿಹೊಳಿ ಅವರನ್ನು ಮಣಿಸಲು ಶ್ರೀರಾಮುಲು ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೆಳೆಯುವ ಯತ್ನ ಮಾಡುತ್ತಿದ್ದಾರೆ ಎಂದು ಬಳ್ಳಾರಿ ಭಾಗದಲ್ಲಿ ಮಾತನಾಡುತ್ತಿದ್ದಾರೆ ಎಂದು ಜನಾರ್ದನ ರೆಡ್ಡಿ ಗುರುವಾರ ಹೇಳಿದ್ದರು. ಈ ಹೇಳಿಕೆ ನೀಡಿದ ಜನಾರ್ದನ ರೆಡ್ಡಿ ಅವರಿಗೆ ಹಲವು ಕಾಂಗ್ರೆಸ್ ನಾಯಕರು ತಿರುಗೇಟು ನೀಡಿದ್ದಾರೆ.
‘ಲೋಕಸಭೆ ಚುನಾವಣೆ ವೇಳೆ ಚರ್ಚೆ ಬಗ್ಗೆ ಗೊತ್ತಿಲ್ಲ’
ಸತೀಶ್ ಜಾರಕಿಹೊಳಿ ಮುಗಿಸಲು ರಾಮುಲುರನ್ನ ಕಾಂಗ್ರೆಸ್‌ಗೆ ಕರೆ ತರ್ತಾರೆ ಅನ್ನೋ ರೆಡ್ಡಿ ಆರೋಪಕ್ಕೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಪರಮೇಶ್ವರ್, ಅದರ ಬಗ್ಗೆ ನನಗೆ ಗೊತ್ತಿಲ್ಲ ಎಂದಿದ್ದಾರೆ. ಅವರ ಪಕ್ಷದಲ್ಲಿ ಅದರ ಬಗ್ಗೆ ಗಲಟೆ ಆಗುತ್ತಿದೆ. ನಮ್ಮಲ್ಲಿ ಈ ಬಗ್ಗೆ ಚರ್ಚೆ ಬಂದಿಲ್ಲ. ವಿಚಾರ ಕೂಡ ಪ್ರಸ್ತಾಪ ಆಗಿಲ್ಲ. ಈ ಬಗ್ಗೆ ಅಧ್ಯಕ್ಷರು ಉತ್ತರ ಕೊಡುತ್ತಾರೆ. ಲೋಕಸಭೆ ಚುನಾವಣೆ ವೇಳೆ ಚರ್ಚೆ ಅನ್ನೋದೆಲ್ಲಾ ಗೊತ್ತಿಲ್ಲ ಎಂದು ಪರಮೇಶ್ವರ್ ಹೇಳಿದ್ದಾರೆ.
‘ಅವರವರ ಜಗಳದಲ್ಲಿ ಇದನ್ನ ಹರಿ ಬಿಟ್ಟಿದ್ದಾರೆ’
ಜನಾರ್ದನ ರೆಡ್ಡಿ ಆರೋಪದ ಕುರಿತು ಪ್ರತಿಕ್ರಿಯೆ ನೀಡಿದ ಸಚಿವ ಎಂ.ಬಿ.ಪಾಟೀಲ್, ಸತೀಶ್ ಜಾರಿಹೊಳಿ ಅವರನ್ನು ಮಣಿಸಲು ಸಾಧ್ಯವಿಲ್ಲ. ರಾಮುಲು ಬರೋದು ಬಿಡೋದು ಪಕ್ಷ ಹಾಗು ಹೈಕಮಾಂಡ್ ನಿರ್ಧಾರ ಮಾಡಬೇಕು. ನಾನು ನಿರ್ಣಯ ಮಾಡೋದಲ್ಲ. ಸತೀಶ್ ಜಾರಕಿಹೊಳಿ ಹಿರಿಯ ಮುಖಂಡರಾಗಿದ್ದು ಅವರನ್ನ ಮಣಿಸುವ ಉದ್ದೇಶ ಯಾರಿಗೂ ಇಲ್ಲ. ರೆಡ್ಡಿ ಅವರದ್ದು ರಾಜಕೀಯ ಸ್ಟೇಟ್ಮೆಂಟ್ ಅಷ್ಟೆ. ಅವರವರ ಜಗಳದಲ್ಲಿ ಇದನ್ನ ಹರಿ ಬಿಟ್ಟಿದ್ದಾರೆ. ರೆಡ್ಡಿ ಅವರೇ ಕಾಂಗ್ರೆಸ್ ಸೇರುತ್ತಿರಬೇಕು. ಆದರೆ, ನಾವು ಅವರನ್ನ ಸೇರಿಸಿಕೊಳ್ಳಲ್ಲ. ಹಿಂದೆ ನಮ್ಮ ಪರವಾಗಿ ವೋಟ್ ಹಾಕಿರಬೇಕು ಅದು ನನಗೆ ಗೊತ್ತಿಲ್ಲ. ಆದರೆ ಈ ಹಿಂದೆ ನಾವೇ ಅವರ ವಿರುದ್ಧ ಹೋರಾಟ ಮಾಡಿದ್ದೇವೆ ಎಂದು ಸಚಿವರು ಹೇಳಿದರು.
ಚರ್ಚೆಯಲ್ಲಿ ಇದೆ ಎಂದ ಸತೀಶ್ ಜಾರಕಿಹೊಳಿ
ಇನ್ನು ಶ್ರೀರಾಮಲು ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಬೆಳಗಾವಿಯಲ್ಲಿ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಚರ್ಚೆಯಲ್ಲಿ ಇದೆ ನಮಗೂ ಅದರ ಬಗ್ಗೆ ಸ್ಪಷ್ಟವಾಗಿ ಮಾಹಿತಿ ಇಲ್ಲ ಎಂದರು. ಬೆಂಗಳೂರಿಗೆ ಹೋಗಿ ಸಂಪೂರ್ಣ ಮಾಹಿತಿ ಪಡೆಯುವೆ. ಪೂರ್ಣ ಪ್ರಮಾಣದಲ್ಲಿ ಏನು ಬೆಳವಣಿಗೆ ಆಗಿದೆ ಗೊತ್ತಿಲ್ಲ, ಟಿವಿಯಲ್ಲಿ ನೋಡಿದ್ದೇನೆ ಅಷ್ಟೇ. ಬೆಂಗಳೂರಿಗೆ ಹೋದ ಬಳಿಕ ಪೂರ್ಣ ಮಾಹಿತಿ ಪಡೆದು ಮಾತನಾಡುತ್ತೇನೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.