ರಾಜ್ಯ ಬಿಜೆಪಿಯಲ್ಲಿ ಕಳೆದ ಒಂದು ವರ್ಷದಿಂದ ನಡೆಯುತ್ತಿರುವ ಆಂತರಿಕ ಕಚ್ಚಾಟ ಮತ್ತಷ್ಟು ತೀವ್ರಗೊಂಡಿದೆ

ರಾಜಕೀಯ

1/20/20251 ನಿಮಿಷ ಓದಿ

ಪರಸ್ಪರ ವೈಯಕ್ತಿಕ ನಿಂದನೆ ಹೆಚ್ಚಾಗಿದೆ. ರಾಜ್ಯ ಘಟಕ ಅಧ್ಯಕ್ಷ ಸ್ಥಾನದ ಚುನಾವಣೆ ಸಮೀಪ ಪರಿಸ್ಥಿತಿ ಕೈ ಮೀರಿದ್ದು, ವಸ್ತುಸ್ಥಿತಿ ಪಡೆಯಲು ಬಿಎಲ್ ಸಂತೋಷ್ ರಾಜ್ಯಕ್ಕೆ ಬಂದಿದ್ದಾರೆ. ಈ ಮಧ್ಯೆ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಸುನಿಲ್ ಕುಮಾರ್ ವಿಮುಕ್ತಿ ಕೇಳೋ ಮೂಲಕ ನಾಯಕರಿಗೆ ಶಾಕ್ ಕೊಟ್ಟಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಸಮೀಪಿಸುತ್ತಿದೆ. ಈ ಚುನಾವಣೆ ಪಕ್ಷದೊಳಗಿನ ಬಣಗಳ ಮಧ್ಯೆ ಬಲ ಪ್ರದರ್ಶನಕ್ಕೆ ವೇದಿಕೆ ಆಗುವ ಎಲ್ಲಾ ಲಕ್ಷಣಗಳೂ ಈಗಿಂದಲೇ ಕಾಣಿಸುತ್ತಿದೆ. ಹೌದು, ಬಿಜೆಪಿ ಮನೆ ಬಿರುಕು ಮುಚ್ಚಲಾಗದಷ್ಟು ಹೆಚ್ಚಾಗಿದ್ದು, ಆಂತರಿಕ ಕಚ್ಚಾಟ ಉಲ್ಬಣಗೊಂಡಿದೆ. ಯತ್ನಾಳ್ ತಂಡ ಹಾಗೂ ವಿಜಯೇಂದ್ರ ಮಧ್ಯೆ ವಾಕ್ಸಮರ ತೀವ್ರಗೊಂಡಿದ್ದು, ವೈಯಕ್ತಿಕ ಹಂತಕ್ಕೆ ಹೋಗಿದೆ.

ರಮೇಶ್ ಜಾರಕಿಹೊಳಿಯವರು ಇತ್ತೀಚೆಗಷ್ಟೇ ಯಡಿಯೂರಪ್ಪ ಪ್ರವಾಸದ ಬಗ್ಗೆ ಟೀಕೆ ಮಾಡಿದ್ದರು. ಇದರಿಂದ ಕೆರಳಿದ ವಿಜಯೇಂದ್ರ ನಾಲಿಗೆ ಬಿಗಿ ಹಿಡಿದು ಮಾತನಾಡುವಂತೆ ಎಚ್ಚರಿಕೆ ಕೊಟ್ಟಿದ್ದರು. ಅಲ್ಲದೇ ತಾವೇ ಮುಂದಿನ ಅಧ್ಯಕ್ಷ ಆಗೋದು ಖಚಿತ ಎಂದು ಭಿನ್ನರನ್ನು ಕೆಣಕಿದ್ದರು. ಇದರಿಂದ ರೆಬೆಲ್ ಪಡೆ ಉಗ್ರರೂಪ ತಾಳಿ ವಿಜಯೇಂದ್ರ ಹಾಗೂ ಯಡಿಯೂರಪ್ಪ ವಿರುದ್ಧ ವೈಯಕ್ತಿಕ ಹಂತಕ್ಕಿಳಿದು ವಾಕ್ಸಮರ ನಡೆಸುತ್ತಿದೆ. ವಿಜಯೇಂದ್ರ ಬಚ್ಚಾ, ರಾಜ್ಯಾಧ್ಯಕ್ಷ ಆಗಲು ಯೋಗ್ಯರಲ್ಲ, ಕಲೆಕ್ಷನ್ ಮಾಸ್ಟರ್, ಯಡಿಯೂರಪ್ಪ ಜೈಲಿಗೆ ಹೋಗಲು ವಿಜಯೇಂದ್ರ ಕಾರಣ ಎಂದೆಲ್ಲಾ ಯತ್ನಾಳ್-ರಮೇಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದಾರೆ. ಯಡಿಯೂರಪ್ಪ ಕೂಡ ಹಲವರಿಗೆ ಮೋಸ ಮಾಡಿದ್ದು, ಈಗ ಮೊಮ್ಮಕ್ಕಳ ಜೊತೆ ಆಟ ಆಡಿಕೊಂಡಿರಲಿ, ಪುತ್ರ ವ್ಯಾಮೋಹ ಬಿಡಲಿ ಎಂದು ಯತ್ನಾಳ್, ಟೀಕಿಸಿದ್ದಾರೆ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದರೆ, ತಮ್ಮ ಕಡೆಯಿಂದಲೂ ಒಬ್ಬರ ಸ್ಪರ್ಧೆ ಖಚಿತ ಎಂದು ಭಿನ್ನರು ಸವಾಲೆಸೆದಿದ್ದಾರೆ.

ಇತ್ತ ವಿಜಯೇಂದ್ರ ಸಹ ರೆಬೆಲ್ ತಂಡವನ್ನ ಕೆಣಕಿದ್ದಾರೆ. ವರಿಷ್ಠರು ನನ್ನನ್ನೇ ಮತ್ತೊಂದು ಅವಧಿಗೆ ಮುಂದುವರೆಸುವ ವಿಶ್ವಾಸ ಇದೆ ಎಂದು ಹೇಳಿದ್ದಾರೆ. ಆದರೆ ಬಿಎಸ್ವೈ ಪ್ರವಾಸದ ಬಗ್ಗೆ ಮಾತಾಡಿದ್ದ ರಮೇಶ್ ಜಾರಕಿಹೊಳಿ ವಿರುದ್ಧ ಗುಡುಗಿದ ವಿಜಯೇಂದ್ರ ರಾಯಚೂರಿನಲ್ಲಿ ಇಂದು ಮಾತನಾಡಿ, ಯತ್ನಾಳ್ಗೆ ಒಳ್ಳೆಯದಾಗಲಿ, ಅವರಿಗೆಲ್ಲ ಭಗವಂತ ಒಳ್ಳೆಯದು ಮಾಡಲಿ ಎಂದಿದ್ದಾರೆ.

ಇತ್ತ ಪಕ್ಷದ ಬಣ ಕದನದ ಬಗ್ಗೆ ಹಲವರು ರಕ್ಷಣಾತ್ಮಕ ಹೇಳಿಕೆ ಕೊಡುತ್ತಿದ್ದಾರೆ. ಸಂಸದ ಜಗದೀಶ್ ಶೆಟ್ಟರ್ ಮಾತಾಡಿ, ಪಕ್ಷದ ವಿದ್ಯಮಾನಗಳು ಹೈಕಮಾಂಡ್ ಗಮನಕ್ಕಿವೆ. ಎಲ್ಲವನ್ನೂ ವರಿಷ್ಠರು ಸರಿಪಡಿಸ್ತಾರೆ ಎಂದು ಹೇಳಿದ್ದಾರೆ.

ಪಕ್ಷದಲ್ಲಿ ಇಷ್ಟೆಲ್ಲಾ ಜಟಾಪಟಿ ನಡೀತಿರುವ ನಡುವೆ ನಾಯಕರಿಗೆ ಶಾಸಕ ಸುನಿಲ್ ಕುಮಾರ್ ಶಾಕ್ ಕೊಟ್ಟಿದ್ದಾರೆ. ತಮ್ಮನ್ನು ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ವಿಮುಕ್ತಿಗೊಳಿಸಲು ಸುನಿಲ್ ಕುಮಾರ್ ವಿಜಯೇಂದ್ರ ಹಾಗೂ ಬಿ ಎಲ್ ಸಂತೋಷ್ ಬಳಿ ಕೇಳಿಕೊಂಡಿದ್ದು, ಮತ್ತಷ್ಟು ಗೊಂದಲ ಸೃಷ್ಟಿಸಿದೆ. ಸುನಿಲ್ ಕುಮಾರ್ ರಾಜೀನಾಮೆ ಕೊಡಲು ಮುಂದಾಗಿದ್ದಕ್ಕೆ ವಿಜಯೇಂದ್ರ ಕಾರಣ ಎಂದು ಯತ್ನಾಳ್ ಆರೋಪಿಸಿದ್ದಾರೆ.

ಬಿಜೆಪಿಯಲ್ಲಿ ಆಂತರಿಕ ಕಚ್ಚಾಟ ತೀವ್ರಗೊಂಡ ಬೆನ್ನಲ್ಲೇ ಇಂದು ಬಿಜೆಪಿ ಕಚೇರಿಗೆ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಭೇಟಿ ಕೊಟ್ಟಿದ್ದರು. ರಾಜ್ಯ ಘಟಕ ಅಧ್ಯಕ್ಷ ಸ್ಥಾನದ ಚುನಾವಣೆ ಮುನ್ನ ಸಂತೋಷ್ ವಸ್ತುಸ್ಥಿತಿ ರಿಪೋರ್ಟ್ ಪಡೆದಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ ಬಿಜೆಪಿ ಮನೆ ಕಂಟ್ರೋಲ್ ತಪ್ಪಿರೋದಂತೂ ಸ್ಪಷ್ಟ.