ರಾಜ್ಯ ಕಾಂಗ್ರೆಸ್ ನಲ್ಲಿ ಅಧಿಕಾರಕ್ಕಾಗಿ ಹಗ್ಗಜಗ್ಗಾಟ ಮುಂದುವರೆದಿದೆ
ರಾಜಕೀಯಹೋಮ್ ಪೇಜ್
ಸಿಎಂ ಬದಲಾವಣೆ; ಸಂಪುಟ ಪುನಾರಚನೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ.. ಹೀಗೆ ಹತ್ತು ಹಲವು ಸಂಗತಿಗಳು ಕೈ ಪಾಳಯದಲ್ಲಿ ಸದ್ದು ಮಾಡುತ್ತಿವೆ. ಸತೀಶ್ ಜಾರಕಿಹೊಳಿ ಮತ್ತು ಸಿಎಂ ಸಿದ್ದರಾಮಯ್ಯನವರ ಡಿನ್ನರ್ ಪಾಲಿಟ್ರಿಕ್ಸ್ ನಿಂದ ಕೆರಳಿ ಕೆಂಡವಾಗಿದ್ದ ಡಿಕೆಶಿ ಹೈಕಮಾಂಡ್ ಗೆ ದೂರು ಸಲ್ಲಿಸಿದ್ದರು. ತತ್ಪರಿಣಾಮ ಪರಮೇಶ್ವರ್ ಅವರ ಡಿನ್ನರ್ ಸಭೆಗೆ ಬ್ರೇಕ್ ಹಾಕಿತ್ತು. ಇದರಿಂದ ಪರಂ ಅಸಮಾಧಾನ ಹೊರಹಾಕಿದರು.
ಇನ್ನು ಸತೀಶ್ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ ಕುರಿತಂತೆ ಬಹಿರಂಗವಾಗಿಯೇ ಹೇಳಿಕೆ ನೀಡುವ ಮೂಲಕ ಡಿಕೆಶಿಗೆ ಟಕ್ಕರ್ ಕೊಟ್ಟಿದ್ದರು. ದಿನೇ ದಿನೇ ಅಧಿಕಾರಕ್ಕಾಗಿ ಕೈ ಪಾಳಯದಲ್ಲಿ ಹಗ್ಗಜಗ್ಗಾಟ ತೀವ್ರವಾಯಿತು. ಕಡೆಗೆ ರಾಜ್ಯಕ್ಕೆ ಬಂದ ರಣದೀಪ್ ಸುರ್ಜೆವಾಲ ನಾಯಕರಿಗೆ ಖಡಕ್ ಎಚ್ಚರಿಕೆ ನೀಡಿದರೂ ಪ್ರಯೋಜನವಾಗಲಿಲ್ಲ. ಸತೀಶ್ ಜಾರಕಿಹೊಳಿ ಮತ್ತು ಡಿಕೆಶಿ ನಡುವಿನ ಮುಸುಕಿನ ಗುದ್ದಾಟಕ್ಕೆ ಇನ್ನೂ ಸಹ ಬ್ರೇಕ್ ಬಿದ್ದಿಲ್ಲ.
ಈ ಮಧ್ಯೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೈ ನಾಯಕರಿಗೆ ಬಾಯಿ ಮುಚ್ಕೊಂಡಿರಿ.. ಎಂದು ಖಡಕ್ ಆಗಿ ಹೇಳಿದರೂ ಶಾಸಕರು ಮಾತ್ರ ಕ್ಯಾರೆ ಎನ್ನುತ್ತಿಲ್ಲ. ಇನ್ನು ಬಜೆಟ್ ಗೂ ಮುನ್ನ ಸಿಎಂ ಸಂಪುಟ ಪುನಾರಚನೆಗೆ ಒಲವು ತೋರಿದರೆ; ಡಿಕೆಶಿ ಅದಕ್ಕೆ ಅಡ್ಡಗಾಲು ಹಾಕಿ ಕುಳಿತಿರುವುದು ಸಿಎಂಗೆ ಇರಿಸುಮುರಿಸು ತಂದಿಟ್ಟಿದೆ.
ಈ ಎಲ್ಲಾ ಬೆಳವಣಿಗಳ ನಡುವೆ ಮೊದಲ ಬಾರಿ ಆಯ್ಕೆಯಾದ ಕಾಂಗ್ರೆಸ್ ಶಾಸಕರು ಬಜೆಟ್‌ಗೂ ಮುನ್ನ ದುಬೈ, ಸಿಂಗಾಪುರ ಪ್ರವಾಸಕ್ಕೆ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ವಿದೇಶ ಪ್ರವಾಸದ ಬಗ್ಗೆ ಆಸೀಫ್ ಸೇಠ್, ಬಾಬಾಸಾಹೇಬ್ ಪಾಟೀಲ್ ಮಾಹಿತಿ ನೀಡಿದ್ದಾರೆ. ನಾಲ್ಕು ದಿನಗಳ ವಿದೇಶ ಪ್ರವಾಸಕ್ಕೆ 8 ರಿಂದ 10 ಕಾಂಗ್ರೆಸ್ ಶಾಸಕರು ಪ್ಲ್ಯಾನ್ ಮಾಡಿದ್ದಾರೆ. ರಾಜ್ಯ ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿಯೇ ಈ ಬೆಳವಣಿಗೆ ನಡೆಯುತ್ತಿರುವುದು ತೀವ್ರ ಕುತೂಹಲ ಸೃಷ್ಟಿಸಿದೆ. ದುಬೈ ಪ್ರವಾಸದ ಹಿಂದೆ ಅದ್ಯಾವ ಹಕೀಕತ್ತಿದೆ. ಅಧಿಕಾರದ ಮೇಲಾಟದಲ್ಲಿ ಒಂಟಿಯಾದ್ರ ಡಿಕೆಶಿ? ಅಧಿಕಾರದಿಂದ ದೂರವಿಡಲು ಸಿಎಂ ತೊಡ್ತಿದ್ದಾರಾ ಖೆಡ್ಡಾ? ಅಹಿಂದ, ದಲಿತ ನಾಯಕ ಪ್ರತ್ಯೇಕ ಸಭೆಗಳ ಹಿಡನ್ ಅಜೆಂಡಾ ಏನು? ರಾಜ್ಯ ಬಜೆಟ್ ನಂತರ ಈ ಎಲ್ಲಾ ಪ್ರಶ್ನೆಗಳಿಗೆ ಸಿಗಲಿದ್ಯಾ ಉತ್ತರ? ಸಿದ್ದು ತಂತ್ರಕ್ಕೆ ಡಿಕೆಶಿ ಹೂಡ್ತಾರಾ ಪ್ರತಿತಂತ್ರ? ಕೈ ಪಾಳಯದ ಈ ರಾಜಕೀಯ ಹೈಡ್ರಾಮದ ಕ್ಲೈಮ್ಯಾಕ್ಸ್ ಏನು ಅನ್ನೋದನ್ನು ಕಾದು ನೋಡಬೇಕಿದೆ.
