ವಿಜಯ್ ಹಜಾರೆ ಟ್ರೋಫಿ : 5ನೇ ಬಾರಿ ಕರ್ನಾಟಕ ಚಾಂಪಿಯನ್
ಬಿ ಎನ್ ಎನ್
ಕ್ರಿಕೆಟ್


2024-25 ಸಾಲಿನ ವಿಜಯ್ ಹಜಾರೆ ರಾಷ್ಟ್ರೀಯ ಏಕದಿನ ಟೂರ್ನಿಯ ಫೈನಲ್ ಪಂದ್ಯದಲ್ಲಿ ವಿದರ್ಭ ವಿರುದ್ಧ ಗೆದ್ದು ಬೀಗಿದ ಕರ್ನಾಟಕ ತಂಡ ೫ನೇ ಬಾರಿಗೆ ಚಾಂಪಿಯನ್ ಕಿರೀಟವನ್ನು ಮುಡಿಗೇರಿಸಿಕೊಂಡಿದೆ.
ಕರ್ನಾಟಕ ತಂಡ 2013-14ರಲ್ಲಿ ಚೊಚ್ಚಲ ವಿಜಯ್ ಹಜಾರೆ ಟ್ರೋಫಿ ಗೆದ್ದುಕೊಂಡಿತ್ತು. ಆ ನಂತರ 2014-15, 2017-18 ಹಾಗೂ 2019-20ರಲ್ಲಿ ಪ್ರಶಸ್ತಿ ಗೆದ್ದಿತ್ತು. ಇದೀಗ ಮಯಾಂಕ್ ಅಗರ್ವಾಲ್ ನಾಯಕತ್ವದಲ್ಲಿ ಫೈನಲ್ ತಲುಪಿದ್ದ ಕರ್ನಾಟಕ ತಂಡ ೫ನೇ ಬಾರಿ ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಂಡಿದೆ.
ವಡೋದರಾದ ಕೊಟಾಂಬಿ ಸ್ಟೇಡಿಯಂನಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮಯಾಂಕ್ ಅಗರ್ವಾಲ್ ನೇತೃತ್ವದ ಕರ್ನಾಟಕ ತಂಡ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 348 ರನ್ ಗಳಿಸಿತ್ತು. 349 ರನ್ಗಳ ಬೃಹತ್ ಮೊತ್ತದ ಗುರಿ ಬೆನ್ನಟ್ಟಿದ ಕರುಣ್ ನಾಯರ್ ನೇತೃತ್ವದ ವಿದರ್ಭ ತಂಡ 48.2 ಓವರ್‌ಗಳಲ್ಲಿ 312 ರನ್‌ಗಳಿಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿತ್ತು. 4ನೇ ಬಾರಿಗೆ ಫೈನಲ್‌ನಲ್ಲಿ ಕರ್ನಾಟಕ ತಂಡದ ಎದುರು ಮುಖಾಮುಖಿಯಾಗಿದ್ದ ವಿದರ್ಭ ಚೊಚ್ಚಲ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿತ್ತು.
ಕರುಣ್ ನಾಯರ್ ಬೇಗ ಔಟಾಗಿದ್ದು ಕರ್ನಾಟಕಕ್ಕೆ ಪ್ಲಸ್:
33ರ ಹರೆಯದ ಕರುಣ್ ನಾಯರ್ ಈ ಬಾರಿ ವಿಜಯ್ ಹಜಾರೆ ಟೂರ್ನಿಯಲ್ಲಿ ೫ ಶತಕ ಸಿಡಿಸಿದ್ದರು. ಜೊತೆಗೆ ಒಂದೇ ಋತುವಿನಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ತಮಿಳುನಾಡಿನ ಬ್ಯಾಟರ್ ಎನ್. ಜಗದೀಶನ್ ಅವರ ದಾಖಲೆಯನ್ನು ಸರಿಗಟ್ಟಿದ್ದರು. ಜನವರಿ 3 ರಂದು ಯುಪಿ ವಿರುದ್ಧ ಮೊದಲ ಶತಕ, ಡಿಸೆಂಬರ್ 31 ರಂದು ತಮಿಳುನಾಡು ವಿರುದ್ಧ 2ನೇ ಶತಕ, ಡಿ.28 ರಂದು ಚಂಡೀಗಢ ವಿರುದ್ಧ 3ನೇ ಶತಕ, ಡಿ.26 ರಂದು ಛತ್ತೀಸ್ಗಢ ವಿರುದ್ಧ ಮತ್ತು ಜಮ್ಮು & ಕಾಶ್ಮೀರ ವಿರುದ್ಧ ಅಜೇಯ ಇನ್ನಿಂಗ್ಸ್‌ಗಳನ್ನು ಆಡಿ ಶತಕ ಬಾರಿಸಿದ್ದರು. ಒಟ್ಟು 8 ಇನ್ನಿಂಗ್ಸ್‌ನಲ್ಲಿ 123.55 ಸ್ಟ್ರೈಕ್‌ರೇಟ್ ಹಾಗೂ 389.5 ಸರಾಸರಿಯಲ್ಲಿ 779 ರನ್ ಚಚ್ಚಿದ್ದಾರೆ. ಫೈನಲ್ ಪಂದ್ಯದಲ್ಲೂ ಅಬ್ಬರಿಸುತ್ತಿದ್ದ ನಾಯರ್ 31 ಎಸೆತಗಳಲ್ಲಿ 27 ರನ್ ಗಳಿಸಿದ್ದಾಗ ಪ್ರಸಿದ್ಧ್ ಕೃಷ್ಣ ವೇಗದ ದಾಳಿಗೆ ಕ್ಲೀನ್ ಬೌಲ್ಡ್ ಆದರು. ಇದು ಕರ್ನಾಟಕ ತಂಡಕ್ಕೆ ಬಹುದೊಡ್ಡ ಲಾಭವಾಯಿತು.
ರವಿಚಂದ್ರನ್ ಸ್ಮರಣ್ ಶತಕ ಸಫಲ:
ಮೊದಲು ಬ್ಯಾಟಿಂಗ್ ಮಾಡಿದ್ದ ಕರ್ನಾಟಕ ತಂಡ 14 ಓವರ್‌ಗಳಲ್ಲೇ 67 ರನ್‌ಗಳಿಗೆ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದು ಕ್ರೀಸ್‌ನಲ್ಲಿ ನೆಲೆಯೂರಿದ ರವಿಚಂದ್ರನ್ ಸ್ಮರಣ್ ಶತಕ ಸಿಡಿಸುವ ಮೂಲಕ ತಂಡಕ್ಕೆ ಆಸರೆಯಾದರು. ಇದರೊಂದಿಗೆ ಕೃಷ್ಣನ್ ಶ್ರೀಜಿತ್ ಹಾಗೂ ಅಭಿನವ್ ಮನೋಹರ್ ಅವರ ಅರ್ಧಶತಕಗಳ ಬ್ಯಾಟಿಂಗ್ ತಂಡವನ್ನು ಕೈಹಿಡಿಯಿತು.
ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ಪರ ರವಿಚಂದ್ರನ್ 101 ರನ್ (92 ಎಸೆತ, 7 ಬೌಂಡರಿ, 3 ಸಿಕ್ಸರ್), ಕೃಷ್ಣನ್ ಶ್ರೀಜಿತ್ 78 ರನ್ (74 ಎಸೆತ, 9 ಬೌಂಡರಿ, 1 ಸಿಕ್ಸರ್), ಅಭಿನವ್ 79 ರನ್ (42 ಎಸೆತ, 10 ಬೌಂಡರಿ, 4 ಸಿಕ್ಸರ್), ಮಯಾಂಕ್ ಅಗರ್ವಾಲ್ 32ರನ್, ಹಾರ್ದಿಕ್ ರಾಜ್ 12 ರನ್, ಕೆ.ವಿ ಅನೀಶ್ 23 ರನ್, ದೇವದತ್ ಪಡಿಕಲ್ ಹಾಗೂ ಶ್ರೇಯಸ್ ಗೋಪಾಲ್ ಅಜೇಯ 3 ರನ್ ಕೊಡುಗೆ ನೀಡಿದರು.
ಧ್ರುವ ಶೋರೆ ಶತಕ ವ್ಯರ್ಥ:
ಚೇಸಿಂಗ್ ಆರಂಭಿಸಿದ ವಿದರ್ಭ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ಒಂದೆಡೆ ವಿಕೆಟ್ ಕಳೆದುಕೊಳ್ಳುತ್ತಿದ್ದರೆ, ಮತ್ತೊಂದೆಡೆ ಆರಂಭಿಕ ಧ್ರುವ ಶೋರೆ ಜವಾಬ್ದಾರಿ ಬ್ಯಾಟಿಂಗ್ ಪ್ರದರ್ಶನ ನೀಡುತ್ತಲೇ ಇದ್ದರು. ಇದರೊಂದಿಗೆ ಕೊನೆಯಲ್ಲಿ ಹರ್ಷ್ ದುಬೆ ಅವರ ಸ್ಫೋಟಕ ಅರ್ಧಶತಕ ಒಂದಂತದಲ್ಲಿ ತಂಡಕ್ಕೆ ಗೆಲುವು ತಂದೇಬಿಟ್ಟಿತು ಎನ್ನುವಂತಿತ್ತು. ಆದ್ರೆ ಕರ್ನಾಟಕ ಬೌಲರ್ಗಳ ಕೈಚಳಕ ಇವರ ಆಟಕ್ಕೆ ಬ್ರೇಕ್ ಹಾಕಿತು.
ಕೊನೆವರೆಗೂ ಹೋರಾಡಿದ ಧ್ರುವ 111 ಎಸೆತಗಳಲ್ಲಿ 110 ರನ್ (8 ಬೌಂಡರಿ, 2 ಸಿಕ್ಸರ್) ಕೊಡುಗೆ ನೀಡಿದರು. ಇದರೊಂದಿಗೆ ಹರ್ಷ್ ದುಬೆ ಸ್ಫೋಟಕ 62 ರನ್ (30 ಎಸೆತ, 5 ಬೌಂಡರಿ, 5 ಸಿಕ್ಸರ್), ಯಶ್ ರಾಥೋಡ್ 22 ರನ್, ಕರುಣ್ ನಾಯರ್ 27 ರನ್, ಜಿತೇಶ್ ಶರ್ಮಾ 34 ರನ್, ಅಪೂರ್ವ್ ವಾಂಖೆಡೆ 12 ರನ್, ದರ್ಶನ್ ನಾಲ್ಕಂಡೆ 11 ರನ್, ಯಶ್ ಕದಮ್ 15 ರನ್ ಗಳಿಸಿದರು.
ಕರ್ನಾಟಕಕ್ಕೆ 21ನೇ ದೇಸಿ ಕಪ್ ಕಿರೀಟ:
ಕರ್ನಾಟಕ ದೇಸಿ ಕ್ರಿಕೆಟ್ನ ಯಶಸ್ವಿ ತಂಡಗಳಲ್ಲಿ ಒಂದು. ಈವರೆಗೂ 8 ಬಾರಿ ರಣಜಿ, 6 ಬಾರಿ ಇರಾನಿ ಕಪ್, 2 ಬಾರಿ ಮುಷ್ತಾಕ್ ಅಲಿ ಟ್ರೋಫಿ ಗೆದ್ದಿದ್ದ ಕರ್ನಾಟಕ ಇದೀಗ 5ನೇ ಬಾರಿಗೆ ವಿಜಯ್ ಹಜಾರೆ ಟ್ರೋಫಿ ಗೆದ್ದಿದ್ದು, 21ನೇ ದೇಸಿ ಕಪ್ ಗೆದ್ದ ತಂಡ ಎನಿಸಿಕೊಂಡಿದೆ.
ಕರ್ನಾಟಕ ಅಸಾಧಾರಣ ಪ್ರದರ್ಶನ:
ಈ ಬಾರಿ ರಣಜಿ, ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಅಸಾಧಾರಣ ಪ್ರದರ್ಶನ ತೋರಿದ ಕರ್ನಾಟಕ ವಿಜಯ್ ಹಜಾರೆ ಟ್ರೋಫಿಯಲ್ಲೂ ಅಬ್ಬರಿಸಿದೆ. ಸ್ವತಃ ನಾಯಕ ಮಯಾಂಕ್ ಅಗರ್ವಾಲ್ ಮುಂದೆ ನಿಂತು ತಂಡವನ್ನು ಗೆಲುವುನತ್ತ ಕೊಂಡೊಯ್ದರು. ಗುಂಪು ಹಂತದಲ್ಲಿ 7 ಪಂದ್ಯಗಳ ಪೈಕಿ 6ರಲ್ಲಿ ಗೆದ್ದು ನೇರವಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದ ಕರ್ನಾಟಕ ತಂಡ, ಅಂತಿಮ 8ರ ಗಟ್ಟದಲ್ಲಿ ಬರೋಡಾ, ಸೆಮಿಸ್‌ನಲ್ಲಿ ಹರಿಯಾಣ ವಿರುದ್ಧ ಗೆದ್ದು ಫೈನಲ್ ತಲುಪಿತ್ತು.