ಮುಜರಾಯಿ ಕೇಂದ್ರ ಕಚೇರಿ ಕಟ್ಟಲು ಮುಹೂರ್ತ ಬರುವುದೇ?

1/7/2025

ಕಳೆದ ೨-೩ ತಿಂಗಳಿಂದ ಎಂಎಸ್ ಬಿಲ್ಡಿಂಗ್‌ನಲ್ಲಿರುವ ರಾಮಾಂಜನೇಯ ದೇವಸ್ಥಾನದ ಆವರಣದಲ್ಲಿರುವ ಸುಮಾರು ೫ ಗುಂಟೆ ಜಾಗದಲ್ಲಿ ಮುಜರಾಯಿ ಇಲಾಖೆಯ ಕೇಂದ್ರ ಕಚೇರಿಯನ್ನು ನಿರ್ಮಿಸಲು ಸಭೆಗಳನ್ನು ನಡೆಸಿ ಸರ್ಕಾರದ ನಿಯಮದಂತೆ ಕ್ರಮಕ್ಕೆ ಮುಂದಾಗಿದ್ದರು. ಆ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಮಂಜೂರಾತಿ ಮಾಡಲು ಸಹ ಮುಂದಾಗಿರುತ್ತಾರೆಂಬ ಸುದ್ದಿಯು ಇರುತ್ತದೆ. ಆದರೆ ಕಳೆದ ತಿಂಗಳು ಶ್ರೀ ಬಿ.ಎಲ್.ರಘುವಲ್ ಶೆಟ್ಟಿಮೊಮ್ಮಕ್ಕಳು ಎಚ್ಚರಿಕೆ ಘಂಟೆಯನ್ನು ಬಾರಿಸಿರುತ್ತಾರೆ.

ರಾಮಾಂಜನೇಯ ದೇವಸ್ಥಾನದ ಜಾಗ ನಮ್ಮದು

ನಗರದ ಎಂ.ಎಸ್.ಬಿಲ್ಡಿಂಗ್ ಕಟ್ಟಡದ ಆವರಣದಲ್ಲಿರುವ ರಾಮಾಂಜನೇಯ ದೇವಸ್ಥಾನದ ಜಾಗವು ಮುಜರಾಯಿ ಇಲಾಖೆಗೆ ಸೇರಿದ್ದಲ್ಲ. ಆ ಜಾಗ ಮನ್ನಾರ್ ಶೆಟ್ಟಿ ತೋಪು ಬಿ.ಎಲ್.ರಘುವಲ ಶೆಟ್ಟಿ ವಂಶಸ್ಥೃದ್ದು. ಹೀಗಾಗಿ ಯಾವುದೇ ಕಾರಣಕ್ಕೂ ನಮ್ಮ ಜಾಗದಲ್ಲಿ ಧಾರ್ಮಿಕ ಸೌಧ ಕಟ್ಟಲು ಬಿಡುವುದಿಲ್ಲ ಎಂದು ಬಿ.ಎಲ್.ರಘುವಲ್ ಶೆಟ್ಟಿ ಅವರ ಮೊಮ್ಮಕ್ಕಳು ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ದೇವಸ್ಥಾನ ಆವರಣದಲ್ಲಿನ ಜಾಗ ಒಟ್ಟು ೩೧ ಗುಂಟೆ ಇತ್ತು. ಈ ಪೈಕಿ ಲೋಕಾಯುಕ್ತ ಆದೇಶದ ಮೇರೆಗೆ ೨೦೦೪ರಲ್ಲಿ ೫ ಗುಂಟೆ ಜಾಗವನ್ನು ರಸ್ತೆ ಅಗಲೀಕರಣಕ್ಕಾಗಿ ಬಿಟ್ಟುಕೊಟ್ಟಿದ್ದು, ಇದಕ್ಕೆ ಪರಿಹಾರ ಕೂಡ ಪಡೆಯಲಾಗಿದೆ. ಇದೀಗ ಉಳಿದ ೨೬ ಗುಂಟೆ ಜಾಗದಲ್ಲಿ ಧಾರ್ಮಿಕಸೌಧ ನಿರ್ಮಿಸುವುದಾಗಿ ರಾಜ್ಯ ಮುಜರಾಯಿ ಇಲಾಖೆ ಹೇಳುತ್ತಿದೆ. ಇದಕ್ಕೆ ನಮ್ಮ ಒಪ್ಪಿಗೆ ಕೇಳಿಲ್ಲ. ಆದ ಕಾರಣ, ಅಲ್ಲಿ ಯಾವುದೇ ಸೌಧ, ಕಟ್ಟಡವನ್ನು ನಿರ್ಮಿಸಲು ಬಿಡುವುದಿಲ್ಲ. ಒಂದೊಮ್ಮೆ ನಿರ್ಮಾಣ ಚಟುವಟಿಕೆ ಶುರು ಮಾಡಿದರೆ, ನಾವು ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದು ಶೆಟ್ಟಿ ಅವರ ಮೊಮ್ಮಕ್ಕಳಾದ ಬಿ.ಎ.ಜಗನ್ನಾಥ್, ಟಿ.ಎನ್.ಮಂಜುನಾಥ್, ಬಿ.ಡಿ.ಧರ್ಮೇಂದ್ರ ತಿಳಿಸಿದ್ದಾರೆ.

ಬ್ರಿಟಿಷ್ ಸರಕಾರದಿಂದ ನಮ್ಮ ಪೂರ್ವಿಕರಾದ ಮನ್ನಾರ್‌ಶೆಟ್ಟಿ ತೋಪು ಬಿ.ಎಲ್.ರಘುವಲ ಶೆಟ್ಟಿ ಅವರು ೪.೩೩ ಎಕರೆ ಜಾಗವನ್ನು ಖರೀದಿಸಿದರು. ಈ ಪೈಕಿ ೧೯೧೦ರಲ್ಲಿ ಅಂದಿನ ಮೈಸೂರು ಸರಕಾರವು ಲೋಕೋಪಯೋಗಿ ಕಾರ್ಯಾಗಾರ ಮತ್ತು ಸ್ಟೋರ್ಸ್ ಅನ್ನು ವಿಸ್ತರಿಸಲು ಉದ್ದೇಶಿಸಿತ್ತು. ಇದಕ್ಕಾಗಿ ೩.೧೧ ಎಕರೆಯನ್ನು ಸ್ವಾಧೀನಕ್ಕೆ ಪಡೆಯಿತು. ಈ ಜಮೀನಿಗೆ ೨೬೪೬ರೂ., ಎರಡು ಅಣೆ, ಐದು ಪೈಸೆ ಪರಿಹಾರವನ್ನು ಘೋಷಿಸಲಾಯಿತು. ಆದರೆ, ಕಡಿಮೆ ಪರಿಹಾರ ನಿಗಧಿಪಡಿಸಿದ್ದರಿಂದ ನಾವು ಒಪ್ಪಲಿಲ್ಲ. ಅದಲ್ಲದೆ ೧೯೩೫ರಲ್ಲಿ ಸೋಪ್ ಫ್ಯಾಕ್ಟರಿ ನಿರ್ಮಾಣಕ್ಕೆ ೫ ಗುಂಟೆ ಜಾಗ ಸ್ವಾಧೀನಕ್ಕೆ ಪಡೆದು, ೩೪೦೦ ರೂ. ಪರಿಹಾರ ನಿಗಧಿಪಡಿಸಲಾಯಿತು. ಆ ಪರಿಹಾರವನ್ನೂ ಪಡೆದಿಲ್ಲ. ಆದ ಕಾರಣ, ಸದ್ಯದ ಮಾರುಕಟ್ಟೆ ಬೆಲೆಗೆ ಅನುಗುಣವಾಗಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ರಾಮಾಂಜನೇಯ ದೇವಸ್ಥಾನದ ಆವರಣವು ೨೬ ಗುಂಟೆ ಜಾಗದಲ್ಲಿದೆ. ಈ ಜಾಗದ ಒಡೆತನಕ್ಕೆ ಸಂಬಂಧಿಸಿದ ದಾಖಲೆಗಳಿವೆ. ಜಾಗದ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಗಳಲ್ಲಿ ನಮ್ಮ ಪರವಾಗಿಯೇ ತೀರ್ಪು ಬಂದಿದೆ. ಆದರೆ, ಸರಕಾರ ನ್ಯಾಯಾಲಯದ ತೀರ್ಪಿಗೆ ವಿರುದ್ಧವಾಗಿ ಧಾರ್ಮಿಕಸೌಧ ನಿರ್ಮಿಸಲು ಹೊರಟಿದೆ. ಇದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಸಲಿ ವಿಷಯವೇನೆಂದರೆ ಕಳೆದ ೧೦ ವರ್ಷಗಳ ಹಿಂದೆ ಶೆಟ್ಟರ್ ಕುಟುಂಬದವರು ನ್ಯಾಯಾಲಯ ಮೊರೆ ಹೋಗಿದ್ದು ಇದು ವಿಶೇಷ ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪಿದ್ದು ಈ ವ್ಯಾಜ್ಯದಲ್ಲಿ ವಿಶೇಷ ಜಿಲ್ಲಾಧಿಕಾರಿಗಳು ಸರ್ಕಾರ ಹಾಗೂ ಮುಜರಾಯಿ ಇಲಾಖೆ ಪರವಾಗಿ ಆದೇಶವನ್ನು ಮಾಡಿರುತ್ತಾರೆ. ಇದನ್ನು ಪ್ರಶ್ನಿಸಿ ಅರ್ಜಿದಾರರು ನ್ಯಾಯಾಲಯ ಮೊರೆ ಹೋಗಿದ್ದರು. ಆ ವ್ಯಾಜ್ಯವು ನಡೆಯುತ್ತಿದ್ದು ಇದರ ಮಧ್ಯೆ ಅಂದಿನ ಕಾರ್ಯನಿರ್ವಹಿಸುವ ಅಧಿಕಾರಿಗಳು ಹಾಗೂ ಬೆಂಗಳೂರು ನಗರ ಮುಜರಾಯಿ ಸಹಾಯಕ ಆಯುಕ್ತರು ಆ ಪ್ರಕರಣವನ್ನೇ ಲಕ್ಷಾಂತರ ರೂಪಾಯಿಗೆ ಮಾರಿ ಅವರ ಅರ್ಜಿಯನ್ನು ನ್ಯಾಯಾಲಯದಿಂದ ವಾಪಸ್ ಪಡೆದಿರುತ್ತಾರೆಂಬ ಸುದ್ದಿಯು ಇರುತ್ತದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳ ಸಲಹೆಯಂತೆ ಮಲ್ಲೇಶ್ವರಂ ಮಹಾಗಣಪತಿ ಹಾಗೂ ಸಮೂಹ ದೇವಾಲಯಗಳ ಕಾರ್ಯನಿರ್ವಹಿಸುವ ಅಧಿಕಾರಿಗಳಾದ ಶ್ರೀಮತಿ ಭಾಗ್ಯರವರು ಈಗಾಗಲೇ ಕೆಲವರ ಮೇಲೆ ದೂರು ನೀಡಿದ್ದು ತನಿಖೆಯಲ್ಲಿ ಇರುತ್ತದೆ. ಎಲ್ಲದ್ದಕ್ಕಿಂತ ಹೆಚ್ಚಾಗಿ ಈ ದೇವಾಲಯದ ಅರ್ಚಕರ ಕೈವಾಡವೂ ಇರುತ್ತದೆ ಎಂಬ ಸುದ್ದಿಯು ಇರುತ್ತದೆ. ಒಟ್ಟಾರೆ ರಾಮಾಂಜನೇಯಸ್ವಾಮಿ ದೇವಾಲಯ ಆವರಣದಲ್ಲಿ ಕೇಂದ್ರ ಕಚೇರಿ ನಿರ್ಮಿಸಲು ಇನ್ನು ಯಾವ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತಾರೆಂದು ಕಾದು ನೋಡಬೇಕು.

ಅದು ಮಾತ್ರವಲ್ಲದೆ ಮಾನ್ಯ ವಿಶೇಷ ಜಿಲ್ಲಾಧಿಕಾರಿಗಳ ಸುಮಾರು ೮೦ ಪುಟದ ಆದೇಶ ಇದ್ದು ಮಾಯ ಮಾಡಿ ಅರ್ಜಿದಾರರಿಗೆ ಸಹಾಯ ಮಾಡಿರುವುದು ಕೇಳಿಬಂದಿರುತ್ತದೆ. ಮಾನ ಮರ್ಯಾದೆಯಿಲ್ಲದ ಈ ಮುಜರಾಯಿ ಇಲಾಖೆ ಈಗಾಗಲೇ ರಾಜ್ಯದ ಹಲವಾರು ಮುಜರಾಯಿ ದೇವಾಲಯಗಳನ್ನು ಹಣ ಪಡೆದು ಖಾಸಗೀಕರಣ ಮಾಡಿದ್ದು ಮಾತ್ರವಲ್ಲದೆ ಸಂಬಂಧಪಟ್ಟ ಹಲವಾರು ಕಡತಗಳನ್ನು ಹಣಕ್ಕಾಗಿ ಮಾರಿರುತ್ತಾರೆಂಬ ಸುದ್ದಿಯು ಇರುತ್ತದೆ. ಒಟ್ಟಾರೆ ಮುಜರಾಯಿ ಇಲಾಖೆಯ ಗ್ರಹಗತಿಗಳು ಸರಿಯಿದೆಯೇ ಎಂಬ ಪ್ರಶ್ನೆಯನ್ನು ಕೇರಳದ ನಂಬೂದರಿಗಳಿಂದ ತಿಳಿದುಕೊಳ್ಳಬೇಕಾಗಿರುತ್ತದೋ ಏನೋ?

ಮಾನ್ಯ ಮುಜರಾಯಿ ಆಯುಕ್ತರಾಗಲಿ ಅಥವಾ ಮುಜರಾಯಿ ಸಚಿವರು ಇಂತಹ ಜಾಗಗಳನ್ನು ಆಯ್ಕೆ ಮಾಡುವ ಮುನ್ನ ಪೂರ್ಣವಾಗಿ ಪರಿಶೀಲನೆ ಮಾಡಿ ತಮ್ಮ ಕೇಂದ್ರ ಕಚೇರಿ ಕಟ್ಟಲು ಕಾನೂನುಬದ್ಧವಾಗಿ ಯೋಗ್ಯತೆ ಇದೆಯೇ ಎಂಬ ಮಾಹಿತಿಯನ್ನು ಪಡೆಯದೇ ಮುಂದಾಗಿರುವುದು ಎಷ್ಟರ ಮಟ್ಟಿಗೆ ಸರಿ? ಕಳೆದ ಕೆಲವು ವರ್ಷಗಳ ಹಿಂದೆ ಶ್ರೀಮತಿ ರೋಹಿಣಿ ಸಿಂದೂರಿರವರು ಕರ್ನಾಟಕ ಛತ್ರ ತಿರುಮಲಕ್ಕಾಗಿ ಮೀಸಲಿಟ್ಟ ೫ ಕೋಟಿ ಹಣವನ್ನು ಕನ್ನಿಗ್ಯಾಮ್ ರಸ್ತೆಯಲ್ಲಿರುವ ಸಂಪಂಗಿರಾಮ ದೇವಾಲಯದ ಜಾಗದಲ್ಲಿ ಕೇಂದ್ರ ಕಚೇರಿಯನ್ನು ಕಟ್ಟಲು ಮುಂದಾಗಿದ್ದು ಅಲ್ಲಿದ್ದ ಪೊಲೀಸ್ ಠಾಣೆ ಮತ್ತು ಇತರೆ ಜಾಗವನ್ನು ಖಾಲಿ ಮಾಡಿಸಲು ವಿಫಲಗೊಂಡಿದ್ದು ಕೊನೆಗೆ ಕೈಬಿಟ್ಟಿರುತ್ತಾರೆ.

ಆದರೆ ರಾಮಾಂಜನೇಯಸ್ವಾಮಿ ದೇವರು ಮುಂದೆ ಏನು ಮಾಡುತ್ತಾನೆಂದು ಕಾದುನೋಡಬೇಕಾಗಿರುತ್ತದೆ.