ವಿಶ್ವಪ್ರಸಿದ್ಧ 'ಮಹಾಕುಂಭ ಮೇಳ' ಆರಂಭ

ರಾಷ್ಟ್ರೀಯಹೋಮ್ ಪೇಜ್ವಿಶ್ವ

1/13/20251 ನಿಮಿಷ ಓದಿ

ಪ್ರಯಾಗ್‌ರಾಜ್: 144 ವರ್ಷಗಳಿಗೊಮ್ಮೆ ನಡೆಯುವ ವಿಶ್ವದ ಅತಿದೊಡ್ಡ ಧಾರ್ಮಿಕ ಮೇಳ ಮಹಾ ಕುಂಭಮೇಳ ಪ್ರಯಾಗ್‌ರಾಜ್‌ನಲ್ಲಿ ಆರಂಭವಾಗಿದೆ. ಲಕ್ಷಾಂತರ ನಾಗ ಸಾಧುಗಳು ಪವಿತ್ರ ಸ್ನಾನ ಮಾಡುವ ಮೂಲಕ ಮಹಾಕುಂಭ ಮೇಳಕ್ಕೆ ವಿದ್ಯುಕ್ತ ಚಾಲನೆ ನೀಡಿದ್ದಾರೆ. ಫೆಬ್ರವರಿ 26ರ ಮಹಾ ಶಿವರಾತ್ರಿವರೆಗೂ ಮಹಾಕುಂಭ ಮೇಳ ನಡೆಯಲಿದೆ. 40 ಕೋಟಿಗೂ ಅಧಿಕ ಜನರು ಭಾಗಿಯಾಗುವ ನಿರೀಕ್ಷೆಯಿದೆ. ಗಂಗಾ, ಯಮುನಾ, ಸರಸ್ವತಿ ನದಿಗಳ ಸಂಗಮದಲ್ಲಿ ಪುಣ್ಯ ಸ್ನಾನ ನಡೆಯಲಿದ್ದು, ಉತ್ತರ ಪ್ರದೇಶ ಸರ್ಕಾರದಿಂದ ಸಂಪೂರ್ಣ ತಯಾರಿ ನಡೆದಿದೆ. ಇಲ್ಲಿಯವರೆಗೆ, 40 ಲಕ್ಷಕ್ಕೂ ಹೆಚ್ಚು ಜನರು ನದಿಯಲ್ಲಿ ಸ್ನಾನ ಮಾಡಿದ್ದಾರೆ ಎಂದು ಮಹಾ ಕುಂಭಮೇಳದ ಅಧಿಕಾರಿ ವಿಜಯ್ ಕಿರಣ್ ಆನಂದ್ ಅವರು ತಿಳಿಸಿದ್ದಾರೆ. ಶನಿವಾರ ಸಂಗಮದಲ್ಲಿ ಸ್ನಾನ ಮಾಡಲು 33 ಲಕ್ಷ ಭಕ್ತರು ಭೇಟಿ ನೀಡಿದ್ದರು. ಕಳೆದ ಎರಡು ದಿನಗಳಲ್ಲಿ 85 ಲಕ್ಷಕ್ಕೂ ಹೆಚ್ಚು ಜನರು ನದಿಯಲ್ಲಿ ಸ್ನಾನ ಮಾಡಿದ್ದಾರೆಂದು ಮಾಹಿತಿ ನೀಡಿದ್ದಾರೆ. ಮಹಾಕುಂಭ ಮೇಳದಲ್ಲಿ ಆರು ಶಾಹಿ ಸ್ನಾನ ನಡೆಯಲಿದೆ. ಪುಣ್ಯಸ್ನಾನಕ್ಕೆ ಸರ್ಕಾರದಿಂದ ಸಕಲ ವ್ಯವಸ್ಥೆಯಾಗಿದೆ. ಅವಘಡಗಳು ನಡೆಯದಂತೆ ಸರ್ಕಾರ ಎಚ್ಚರಿಕೆ ವಹಿಸಿದೆ. ನದಿಯ ಉದ್ದಕ್ಕೂ 12 ಕಿಲೋ ಮೀಟರ್ ಘಾಟ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಎನ್‌ಡಿಆರ್‌ಎಫ್ ಪಡೆಯಿಂದ ನೀರಿನ ಮೇಲೆ ಆ್ಯಂಬುಲೆನ್ಸ್ ನಿರ್ಮಾಣ ಮಾಡಲಾಗಿದೆ. ಐಸಿಯು ಸೌಲಭ್ಯ ಹೊಂದಿರುವ ಅಂಬುಲೆನ್ಸ್‌ಗಳನ್ನು ನದಿ ನೀರಿನ ಮೇಲೆ ನಿಲ್ಲಿಸಲಾಗಿದೆ.ಅಂಬುಲೆನ್ಸ್‌ಗಳಲ್ಲಿ ವೈದ್ಯಕೀಯ ಸಿಬ್ಬಂದಿ ಮತ್ತು ಹಾಸಿಗೆಗಳ ಜೊತೆಗೆ ಆಮ್ಲಜನಕ ಮತ್ತು ವೆಂಟಿಲೇಟರ್‌ಗಳ ಸೌಲಭ್ಯ ಕಲ್ಪಿಸಲಾಗಿದೆ. ನದಿಯಲ್ಲಿ ಸ್ನಾನ ಮಾಡುವವರ ಸುರಕ್ಷತೆಗಾಗಿ 800 ಪ್ರಾದೇಶಿಕ ಸಶಸ್ತ್ರ ಕಾನ್ಸ್‌ಟೇಬಲ್, 150 ಎಸ್‌ಡಿಆರ್‌ಎಫ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಕುಂಭಮೇಳ ಈ ಬಾರಿ ಅತೀ ವಿಶೇಷವಾಗಿದೆ. ಏಕೆಂದರೆ ಪ್ರಯಾಗ್‌ ರಾಜ್‌ನಲ್ಲಿ ಮಹಾ ಕುಂಭಮೇಳ ನಡೆಯುತ್ತಿದ್ದರೆ, ಸಮೀಪದಲ್ಲೇ ಇರುವ ಅಯೋಧ್ಯೆಯಲ್ಲಿ ಮೊದಲ ವಾರ್ಷಿಕೋತ್ಸವ ಸಂಭ್ರಮ ನಡೆಯುತ್ತಿದೆ. ಈ ಮಹಾ ಕುಂಭಮೇಳಕ್ಕೆ ಭಾರತೀಯರಷ್ಟೇ ಅಲ್ಲದೇ ವಿದೇಶಗಳಿಂದಲೂ ಭಕ್ತರು ಆಗಮಿಸುತ್ತಿದ್ದಾರೆ. ಗಂಗಾ, ಯಮುನಾ, ಸರಸ್ವತಿ ನದಿಗಳ ಪವಿತ್ರ ಸಂಗಮದಲ್ಲಿ ಪುಣ್ಯಸ್ನಾನ ಮಾಡುತ್ತಾರೆ. ಇಲ್ಲಿ ಸ್ನಾನ ಮಾಡಿದರೆ ಪಾಪನಾಶ, ಮೋಕ್ಷ ಸಿಗುತ್ತದೆ ಎಂಬುದು ಭಕ್ತರ ನಂಬಿಕೆ. ಈ ಹಿಂದೆ 2013ರಲ್ಲಿ ಮಹಾ ಕುಂಭಮೇಳ ನಡೆದಿತ್ತು. ಇದೀಗ 2025ರ ಜ.13ರಿಂದ ಆರಂಭವಾಗಿದೆ. ಫೆ.26ರ ಶಿವರಾತ್ರಿ ದಿನದಂದು ಈ ಕುಂಭಮೇಳ ಸಂಪನ್ನಗೊಳ್ಳಲಿದೆ. ಜ.14ರಂದು ಮಕರ ಸಂಕ್ರಾಂತಿ, ವಸಂತ, ಪಂಚಮಿ, ಹೀಗೆ 5 ಬಾರಿ ಪುಣ್ಯಸ್ನಾನ ಪ್ರಯಾಗ್‌ರಾಜ್‌ನಲ್ಲಿರುವ ತ್ರಿವೇಣಿ ಸಂಗಮದಲ್ಲಿ ನಡೆಯಲಿದೆ. ಭಾರತೀಯ ಸಂಸ್ಕೃತಿ ಪಾಲಿಸುವವರಿಗೆ ಇಂದು ವಿಶೇಷ ದಿನ: ಪ್ರಧಾನಿ ಮೋದಿಭಾರತೀಯ ಮೌಲ್ಯಗಳು ಮತ್ತು ಸಂಸ್ಕೃತಿಯನ್ನು ಪಾಲಿಸುವವರಿಗೆ ಇದು ಬಹಳ ವಿಶೇಷವಾದ ದಿನ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೇಳಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಭಾರತೀಯ ಮೌಲ್ಯಗಳು ಮತ್ತು ಸಂಸ್ಕೃತಿಯನ್ನು ಪಾಲಿಸುವ ಕೋಟ್ಯಂತರ ಜನರಿಗೆ ಇದು ಬಹಳ ವಿಶೇಷವಾದ ದಿನ, ಮಹಾ ಕುಂಭ 2025 ಪ್ರಯಾಗ್‌ರಾಜ್‌ನಲ್ಲಿ ಪ್ರಾರಂಭವಾಗುತ್ತಿದ್ದು, ನಂಬಿಕೆ, ಭಕ್ತಿ ಮತ್ತು ಸಂಸ್ಕೃತಿಯ ಪವಿತ್ರ ಸಂಗಮದಲ್ಲಿ ಅಸಂಖ್ಯಾತ ಜನರನ್ನು ಒಟ್ಟುಗೂಡಿಸುತ್ತದೆ. ಮಹಾ ಕುಂಭವು ಭಾರತದ ಕಾಲಾತೀತ ಆಧ್ಯಾತ್ಮಿಕ ಪರಂಪರೆಯನ್ನು ಸಾಕಾರಗೊಳಿಸುತ್ತದೆ, ನಂಬಿಕೆ ಮತ್ತು ಸಾಮರಸ್ಯವನ್ನು ಎತ್ತಿ ಹಿಡಿಯುತ್ತದೆ ಎದು ಹೇಳಿದ್ದಾರೆ.ಮತ್ತೊಂದು ಪೋಸ್ಟ್ ನಲ್ಲಿ ಪವಿತ್ರ ಸ್ನಾನ ಮಾಡಿ ಆಶೀರ್ವಾದ ಪಡೆಯಲು ಅಸಂಖ್ಯಾತ ಜನರು ಪ್ರಯಾಗ್‌ರಾಜ್‌ಗೆ ಬರುತ್ತಿರುವುದನ್ನು ನೋಡಿ ನನಗೆ ಸಂತೋಷವಾಗಿದೆ. ಎಲ್ಲಾ ಯಾತ್ರಿಕರು ಮತ್ತು ಪ್ರವಾಸಿಗರಿಗೆ ಶುಭ ಹಾರೈಸುತ್ತೇನೆಂದು ತಿಳಿಸಿದ್ದಾರೆ.

ವರದಿ:ಬಿ ಎನ್ ಎನ್ ನ್ಯೂಸ್